ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಮಂಗಳವಾರದ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ತಮ್ಮ ನಿಸ್ವಾರ್ಥ ಬ್ಯಾಟಿಂಗ್ ಮೂಲಕ ಇದೀಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.
ಮಂಗಳವಾರ ರಾತ್ರಿ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ನಿಗಧಿತ 20 ಓವರ್ ನಲ್ಲಿ 243 ಪೇರಿಸಿತು.
ಈ ಪಂದ್ಯದಲ್ಲಿ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಅಜೇಯ 97 ರನ್ ಸಿಡಿಸಿ ಕೇವಲ 3 ರನ್ ಗಳ ಅಂತರದಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ ವಂಚಿತರಾದರು.
ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಶ್ರೇಯಸ್ ಅಯ್ಯರ್ ಶತಕ ಸಿಡಿಸುವ ಅವಕಾಶ ಸಿಕ್ಕಿತ್ತಾದರೂ ಸಿಂಗಲ್ ರನ್ ಅನ್ನು ಡಬಲ್ ರನ್ ಆಗಿ ಪರಿವರ್ತಿಸಿ ಉತ್ತಮವಾಗಿ ಆಡುತ್ತಿದ್ದ ಶಶಾಂಕ್ ಗೆ ಅವಕಾಶ ಮಾಡಿಕೊಟ್ಟರು.
ನನ್ನ ಶತಕದ ಬಗ್ಗೆ ಚಿಂತೆ ಬಿಟ್ಟು ರನ್ ಬಾರಿಸು
ಈ ವೇಳೆ ಶಶಾಂಕ್ ಬಳಿ ಮಾತನಾಡಿದ ಶ್ರೇಯಸ್ ಅಯ್ಯರ್, 'ನನ್ನ ಶತಕದ ಬಗ್ಗೆ ಚಿಂತೆ ಬಿಟ್ಟು ರನ್ ಬಾರಿಸು' ಎಂದು ಹೇಳಿದ್ದರು. ಈ ವಿಚಾರವನ್ನು ಸ್ವತಃ ಶಶಾಂಕ್ ಪಂದ್ಯ ಮುಕ್ತಾಯದ ಬಳಿಕ ಹಂಚಿಕೊಂಡಿದ್ದು, 'ಇದನ್ನು ಹೇಳಲು ತುಂಬಾ ಹೃದಯ ಮತ್ತು ಧೈರ್ಯ ಬೇಕು ಏಕೆಂದರೆ ಟಿ20ಯಲ್ಲಿ, ವಿಶೇಷವಾಗಿ ಐಪಿಎಲ್‌ನಲ್ಲಿ ಶತಕಗಳು ಸುಲಭವಾಗಿ ಬರುವುದಿಲ್ಲ. ಆದರೆ ಅಯ್ಯರ್ ತಮಗೆ ಸಿಕ್ಕ ಅವಕಾಶವನ್ನು ತಂಡಕ್ಕಾಗಿ ತ್ಯಾಗ ಮಾಡಿದರು ಎಂದು ಶಶಾಂಕ್ ಹೇಳಿದರು.
ಸ್ಪಷ್ಟವಾಗಿ, ನಾನು ಅವರಿಗೆ 'ನಾನು ನಿಮಗೆ ಒಂದು ಸಿಂಗಲ್ ಅಥವಾ ಏನಾದರೂ ನೀಡಬೇಕೇ?' ಎಂದು ಕೇಳಲು ಹೊರಟಿದ್ದೆ".. ಆದರೆ ಈ ವೇಳೆ ಶ್ರೇಯಸ್ ಅಯ್ಯರ್, "ಶಶಾಂಕ್ ಹೋಗಿ ಪ್ರತಿ ಚೆಂಡನ್ನು ಬೌಂಡರಿ ಅಥವಾ ಸಿಕ್ಸರ್‌ಗೆ ಬಾರಿಸು.. ನನ್ನ ಶತಕದ ಬಗ್ಗೆ ಚಿಂತೆ ಬೇಡ ಎಂದು ಹೇಳಿದರು. ಶ್ರೇಯಸ್ ನನಗೆ ಹೇಳಿದ ರೀತಿ ನನಗೆ ಇನ್ನಷ್ಟು ಆತ್ಮವಿಶ್ವಾಸವನ್ನು ನೀಡಿತು. ದಿನದ ಅಂತ್ಯದಲ್ಲಿ ಇದು ತಂಡದ ಆಟ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಆ ಸಂದರ್ಭಗಳಲ್ಲಿ, ನಿಸ್ವಾರ್ಥವಾಗಿರುವುದು ಕಷ್ಟ ಎಂದು ಶಶಾಂಕ್ ಹೇಳಿದ್ದಾರೆ.
'ನಾನು ಅವರನ್ನು ಕಳೆದ 10-15 ವರ್ಷಗಳಿಂದ ಬಲ್ಲೆ. ಅವರು ಹಾಗೆಯೇ ಇದ್ದಾರೆ. ಸ್ಪಷ್ಟವಾಗಿ, ಅವರು ನನಗೆ ಶಾಂತವಾಗಿರಲು, ಕ್ರಿಕೆಟ್ ಶಾಟ್‌ಗಳನ್ನು ಆಡಲು ಹೇಳಿದರು, ನಾನು ಸಾಮಾನ್ಯವಾಗಿ ನನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಆಡುವಂತೆ ಹೇಳಿದರು. ದೇವರ ದಯೆಯಿಂದ, ನಾವು ಉತ್ತಮ ಫಿನಿಶ್ ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಶಶಾಂಕ್ ಹೇಳಿದರು.
ಇನ್ನು ಪಂದ್ಯದ ಕೊನೆಯ ಓವರ್ ನಲ್ಲಿ ಪಂಜಾಬ್ ಕಿಂಗ್ಸ್ 23 ರನ್ ಗಳಿಸಿತು. ಅದರಲ್ಲಿ ವೈಡ್ ಕೂಡ ಸೇರಿತ್ತು. ಶಶಾಂಕ್ 44 ರನ್ ಗಳಿಸಿ (18 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ) ಅಜೇಯರಾಗಿ ಉಳಿದರು.
ಅದಾಗಲೇ 200ರ ಗಡಿ ದಾಟಿದ್ದ ಪಂಜಾಬ್ ಗೆ ಅಯ್ಯರ್ ನಡೆ ಅಚ್ಚರಿ ತರಿಸಿತಾದರೂ ಇದಕ್ಕೆ ಗುಜರಾತ್ ಟೈಟನ್ ನೀಡಿದ ಉತ್ತರ ನೋಡಿದ ಬಳಿಕ ಅಯ್ಯರ್ ನಿರ್ಧಾರ ಒಳ್ಳೆಯದೇ ಎಂಬ ತೀರ್ಮಾನಕ್ಕೆ ಅಭಿಮಾನಿಗಳು ಬರುವಂತಾಯಿತು. ಗುಜರಾತ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿ 232 ರನ್ ಗಳಿಸಿ ಕೇವಲ 11 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.