ನವದೆಹಲಿ: ವಿರಾಟ್ ಕೊಹ್ಲಿಯ ವೃತ್ತಿ ಜೀವನದ ಅತ್ಯುತ್ತಮ ವರ್ಷಗಳಲ್ಲಿ 2016 ಕೂಡ ಒಂದಾಗಿದೆ. 9 ವರ್ಷದ ಹಿಂದೆ ಇದೇ ದಿನದಂದು ಭಾರತದ ಆತಿಥ್ಯದಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸೂಪರ್ 10ರ ಪಂದ್ಯದಲ್ಲಿ ಕೊಹ್ಲಿ ವೃತ್ತಿ ಬದುಕಿನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಆಸ್ಟ್ರೇಲಿಯಾ ನೀಡಿದ್ದ 161 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡ 49 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಸೆಮಿ ಫೈನಲ್ ಸ್ಥಾನ ಭದ್ರ ಪಡಿಸಿಕೊಳ್ಳಲು ಕಡೆಯ ಆರು ಓವರ್ ಗಳಲ್ಲಿ 67 ರನ್ ಗಳ ಅಗತ್ಯವಿತ್ತು.
ಈ ವೇಳೆ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಭಾರತವನ್ನು ಅಪಾಯದಿಂದ ಪಾರು ಮಾಡಿದ್ದರು. ಯುವಿ ಔಟಾದ ಬಳಿಕ ಎಂಎಸ್ ಧೋನಿ ಜೊತೆಯಲ್ಲಿಯೂ ಕೊಹ್ಲಿ ಸುಂದರ ಜತೆಯಾಟವಾಡಿದ್ದರು. ಈ ಪಂದ್ಯದಲ್ಲಿ 51 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ ಕೊಹ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್ ನಿಂದ ಭಾರತ ಪಂದ್ಯವನ್ನು ಗೆದ್ದುಕೊಂಡಿತ್ತು ಮಾತ್ರವಲ್ಲದೆ ಚೇಸ್ ಮೆಸ್ಟ್ರೋ ಅವರ ಸ್ಥಾನವನ್ನು ಭದ್ರಪಡಿಸಿತು. ಈ ಪ್ರದರ್ಶನವು ಕ್ರಿಕೆಟ್ ಇತಿಹಾಸದಲ್ಲಿ ನಿರ್ಣಾಯಕ ಕ್ಷಣವಾಗಿ ಉಳಿದಿದ್ದು, ಅಭಿಮಾನಿಗಳು ಮತ್ತು ವಿಶ್ಲೇಷಕರು T20 ಕ್ರಿಕೆಟ್ ಇತಿಹಾಸದಲ್ಲಿ ಇದು ಶ್ರೇಷ್ಠವಾದದ್ದು ಎಂದು ಶ್ಲಾಘಿಸುತ್ತಾರೆ.
ಆನ್ ಲೈನ್ ನಲ್ಲಿ ಈ ಪಂದ್ಯದ ವಿಡಿಯೋಗಳು ಮತ್ತು ಪೋಟೋಗಳು ಟ್ರೆಂಡಿಂಗ್ ನಲ್ಲಿದ್ದು, ಕೊಹ್ಲಿಯ ಆಟವನ್ನು ಅವರ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.