ದಿಗ್ವೇಶ್ ರಾಠಿ ಮಂಕಡ್ ರನೌಟ್ 
ಕ್ರಿಕೆಟ್

'ಕಂಪ್ಲೀಟ್ ಸಿನಿಮಾ': 'Rishab Pant ಔಟ್ ಮನವಿ ಹಿಂಪಡೆದದ್ದು Digvesh Rathiಗೆ ಮಾಡಿದ ಅಪಮಾನ'; R Ashwin

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರೀಡಾ ಸ್ಪೂರ್ತಿ ವಿಚಾರ ಆಗಾಗ್ಗೆ ಸುದ್ದಿಗೆ ಬರುತ್ತಿದ್ದು, ಪ್ರಮುಖವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಪಂದ್ಯ ಬಳಿಕ ವ್ಯಾಪಕ ಚರ್ಚೆಯಾಗುತ್ತಿದೆ.

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ತಂಡ ಜಿತೇಶ್ ಶರ್ಮಾ (Jitesh Sharma)ರನ್ನು ಮಂಕಡಿಂಗ್ ರನೌಟ್ ಮಾಡಿದ್ದ ದಿಗ್ವೇಶ್ ರಾಠಿ (Digvesh Rathi) ಔಟ್ ಮನವಿಯನ್ನು ಹಿಂಪಡೆಯುವ ಮೂಲಕ LSG ನಾಯಕ ರಿಷಬ್ ಪಂತ್ ಬೌಲರ್ ಗೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ CSK ಆಟಗಾರ ಆರ್ ಅಶ್ವಿನ್ (R Ashwin) ಕಿಡಿಕಾರಿದ್ದಾರೆ.

ಹಾಲಿ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರೀಡಾ ಸ್ಪೂರ್ತಿ ವಿಚಾರ ಆಗಾಗ್ಗೆ ಸುದ್ದಿಗೆ ಬರುತ್ತಿದ್ದು, ಪ್ರಮುಖವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಪಂದ್ಯ ಬಳಿಕ ವ್ಯಾಪಕ ಚರ್ಚೆಯಾಗುತ್ತಿದೆ.

ಈ ಪಂದ್ಯದ ನಿರ್ಣಾಯಕ ಹಂತದಲ್ಲಿ ಲಕ್ನೋ ತಂಡದ ಬೌಲರ್ ದಿಗ್ವೇಶ್ ರಾಠಿ ಆರ್ ಸಿಬಿ ನಾಯಕ ಜಿತೇಶ್ ಶರ್ಮಾರನ್ನು ಮಂಕಡ್ ರನೌಟ್ ಮಾಡಿದ್ದರು. ಈ ವೇಳೆ ಅಂಪೈರ್ ಗೆ ದಿಗ್ವೇಶ್ ಔಟ್ ಗೆ ಮನವಿ ಸಲ್ಲಿಸಿದ್ದರು. ಆದರೆ ಅಂಪೈರ್ ತೀರ್ಪು ಬರುವ ಮುನ್ನವೇ ಲಕ್ನೋ ತಂಡದ ನಾಯಕ ರಿಷಬ್ ಪಂತ್ ಔಟ್ ಮನವಿಯನ್ನು ವಾಪಸ್ ಪಡೆದಿದ್ದರು.

ಆದರೆ ಬಳಿಕ ಅಂಪೈರ್ ಕೂಡ ಅದನ್ನು ನಾಟೌಟ್ ಎಂದು ತೀರ್ಪು ನೀಡಿದ್ದರು. ಅಲ್ಲದೆ ಆ ಎಸೆತವನ್ನು ನೋಬಾಲ್ ಎಂದು ಘೋಷಿಸಿದ್ದರು. ಈ ಘಟನೆ ಬಳಿಕ ಬೌಲರ್ ದಿಗ್ವೇಶ್ ಕೊಂಚ ಅಸಂತೋಷಕ್ಕೆ ತುತ್ತಾದರು.

ಆರ್ ಸಿಬಿ ಗೆ ಭರ್ಜರಿ ಗೆಲುವು

ಮಂಗಳವಾರ ರಾತ್ರಿ ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್‌ (ಎಲ್‌ಎಸ್‌ಜಿ) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಜೈಂಟ್ಸ್‌, ನಾಯಕ ರಿಷಭ್‌ ಪಂತ್ ಶತಕದ (ಅಜೇಯ 118 ರನ್‌) ಬಲದಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 227 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಚಾಲೆಂಜರ್ಸ್‌, ವಿರಾಟ್‌ ಕೊಹ್ಲಿ (54 ರನ್‌), ನಾಯಕ ಜಿತೇಶ್‌ ಶರ್ಮಾ (ಅಜೇಯ 85 ರನ್‌) ಹಾಗೂ ಮಯಂಕ್‌ ಅಗರವಾಲ್‌ (ಅಜೇಯ 41 ರನ್‌) ಅವರ ಸಮಯೋಜಿತ ಬ್ಯಾಟಿಂಗ್‌ ನೆರವಿನಿಂದ ಇನ್ನೂ 8 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ಗೆ 230 ರನ್‌ ಗಳಿಸಿ ಜಯದ ನಗೆ ಬೀರಿತು. ಈ ಗೆಲುವು, ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲು ಆರ್‌ಸಿಬಿಗೆ ನೆರವಾಯಿತು.

ಕಂಪ್ಲೀಟ್ ಸಿನಿಮಾ

ಲಕ್ನೋ ನೀಡಿದ್ದ ಬೃಹತ್ ಗುರಿ ಬೆನ್ನು ಹತ್ತಿದ್ದ ಆರ್‌ಸಿಬಿ 16 ಓವರ್‌ಗಳ ಅಂತ್ಯಕ್ಕೆ 189 ರನ್ ಗಳಿಸಿತ್ತು. ಉಳಿದ 4 ಓವರ್‌ಗಳಲ್ಲಿ ಗೆಲ್ಲಲು ಬೇಕಿದ್ದದ್ದು 39 ರನ್‌. 20 ಎಸೆತಗಳಲ್ಲಿ 49 ರನ್‌ ಬಾರಿಸಿದ್ದ ಜಿತೇಶ್‌ ಹಾಗೂ 19 ಎಸೆತಗಳಲ್ಲಿ 37 ರನ್‌ ಗಳಿಸಿದ ಮಯಂಕ್‌ ಕ್ರೀಸ್‌ನಲ್ಲಿದ್ದರು. ಈ ವೇಳೆ ಬೌಲಿಂಗ್‌ಗೆ ಇಳಿದ ದಿಗ್ವೇಶ್ ರಾಠಿ, ಆರ್‌ಸಿಬಿ ಪಾಳಯದಲ್ಲಿ ಆತಂಕದ ಅಲೆ ಎಬ್ಬಿಸಿದರು. ಮೊದಲ ಎಸೆತವನ್ನು ರಿವರ್ಸ್‌ ಸ್ವೀಪ್‌ ಪ್ರಯೋಗಿಸಿದ ಜಿತೇಶ್‌, ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಆಯುಷ್‌ ಬದೋನಿ ಕೈಗೆ ಕ್ಯಾಚಿತ್ತರು. ಆದರೆ, ಚೆಂಡು ಫೀಲ್ಡರ್‌ ಕೈಸೇರುವ ಮೊದಲು ನೆಲಕ್ಕೆ ತಾಕಿತ್ತೇ ಎಂಬುದನ್ನು ಚೆಕ್‌ ಮಾಡುವ ವೇಳೆ, ಎಸೆತ ನೋ ಬಾಲ್‌ ಆಗಿದ್ದದ್ದು ಗಮನಕ್ಕೆ ಬಂದಿತು. ಹೀಗಾಗಿ, ಜಿತೇಶ್‌ ಉಳಿದುಕೊಂಡರು.

ಮತ್ತೆ ಶಾಕ್ ಕೊಟ್ಟ ದಿಗ್ವೇಶ್, ಕ್ರೀಡಾ ಸ್ಫೂರ್ತಿ ಮೆರೆದೆ ಪಂತ್

ಆದರೆ, ಓವರ್‌ನ ಕೊನೇ ಎಸೆತಕ್ಕೆ ಮುನ್ನ ದಿಗ್ವೇಶ್‌ ಮತ್ತೊಮ್ಮೆ ಶಾಕ್ ನೀಡಿದರು. ಬೌಲಿಂಗ್ ಮಾಡಲು ಬಂದ ದಿಗ್ವೇಶ್, ನಾನ್‌ಸ್ಟ್ರೈಕರ್‌ ಎಂಡ್‌ನಲ್ಲಿದ್ದ ಜಿತೇಶ್‌ ಅವರು ಕ್ರೀಸ್‌ನಿಂದ ಮುಂದೆ ಹೋಗುತ್ತಿರುವುದನ್ನು ಗಮನಿಸಿ ಬೆಲ್ಸ್‌ ಎಗರಿಸಿ ಔಟ್‌ಗೆ ಮನವಿ ಮಾಡಿದರು. ಪರಿಶೀಲನೆ ವೇಳೆ, ದಿಗ್ವೇಶ್‌ ಅವರು, ಜಿತೇಶ್‌ಗೂ ಮೊದಲೇ ಕ್ರೀಸ್‌ ದಾಟಿರುವುದು ಕಂಡು ಬಂತು. ಹಾಗಾಗಿ, ಪರದೆ ಮೇಲೆ ನಾಟೌಟ್ ಎಂದು ಪ್ರಕಟವಾಯಿತು. ಅಷ್ಟರಲ್ಲಿ, ರಿಷಭ್‌ ಕೂಡ 'ನಾನ್‌ಸ್ಟ್ರೈಕರ್ ರನೌಟ್' ಔಟ್‌ ಮನವಿಯನ್ನು ಹಿಂಪಡೆದರು. ರಿಷಭ್‌ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಜಿತೇಶ್‌ ಕೂಡ ಆಲಂಗಿಸಿದರು. ಇದೀಗ, ಲಖನೌ ನಾಯಕ ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿದಿದ್ದಾರೆ ಎಂದೆಲ್ಲ ಚರ್ಚೆಯಾಗುತ್ತಿದೆ.

ಬೌಲರ್ ಗೆ ಮಾಡಿದ ಅಪಮಾನ: ಪಂತ್ ವಿರುದ್ಧ ಅಶ್ವಿನ್ ಟೀಕೆ

ಕ್ರೀಡಾಸ್ಪೂರ್ತಿ ವಿಚಾರವಾಗಿ ಪಂತ್ ವಿರುದ್ಧ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗೆ ಮಾಜಿ ಕ್ರಿಕೆಟಿಗ ಆರ್‌. ಅಶ್ವಿನ್‌ ಕೂಡ ಕೈ ಜೋಡಿಸಿದ್ದು, ಪಂತ್ ಮಾಡಿದ್ದು ತಪ್ಪು. ಅವರು ಬೌಲರ್ ನನ್ನು ಅಪಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ. ತಮ್ಮ ಯುಟ್ಯೂಬ್ ಚಾನಲ್‌ 'Ash Ki Baat'ನಲ್ಲಿ ಮಾತನಾಡಿದ ಆರ್ ಅಶ್ವಿನ್, 'ಆಟಗಾರರನ್ನು ಬೆಂಬಲಿಸುವುದು ನಾಯಕನ ಕರ್ತವ್ಯ. ಔಟ್‌ಗಾಗಿನ ಮೇಲ್ಮನವಿಯನ್ನು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡುವ ಮೊದಲೇ ಚರ್ಚಿಸಬೇಕಿತ್ತು. ಆಟಗಾರರನ್ನು ಬೆಂಬಲಿಸುವುದು ನಾಯಕನ ಕೆಲಸ. ಬೌಲರ್‌ ತಮ್ಮನ್ನು ತಾವು ಸಣ್ಣವರಂತೆ ಭಾವಿಸಿಕೊಳ್ಳುವಂತೆ ಮಾಡಬಾರದು. ಮೇಲ್ಮನವಿಯನ್ನು ಹಿಂಪಡೆಯುವ ನಿರ್ಧಾರವನ್ನು ಮೊದಲೇ ಮಾಡಬೇಕಿತ್ತು' ಎಂದು ಹೇಳಿದ್ದಾರೆ.

ಅಲ್ಲದೆ 2020ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದ ಅಶ್ವಿನ್‌, ಆಗಿನ ಕೋಚ್‌ ರಿಕಿ ಪಾಂಟಿಂಗ್ ನೀಡಿದ್ದ ಸೂಚನೆಯನ್ನು ಸ್ಮರಿಸಿದ್ದಾರೆ. ನಾನ್‌ ಸ್ಟ್ರೈಕರ್‌ ಎಂಡ್‌ನಲ್ಲಿರುವ ಯಾವುದೇ ಬ್ಯಾಟರ್‌ ಅನ್ನು ರನೌಟ್‌ ಮಾಡಬಾರದು ಎಂದು ಪಾಂಟಿಂಗ್‌ ಅವರು ಟೂರ್ನಿ ಆರಂಭಕ್ಕೂ ಮುನ್ನವೇ ಆಟಗಾರರಿಗೆ ಹೇಳಿದ್ದರು. ಹಾಗಾಗಿ, ಎಲ್ಲರೂ ಅವರ ಮಾತನ್ನು ಪಾಲಿಸಿದ್ದೆವು. ಆದರೆ, ಈ ರೀತಿಯ ಯಾವುದೇ ಸ್ಪಷ್ಟನೆ ಎಲ್‌ಎಸ್‌ಜಿ vs ಆರ್‌ಸಿಬಿ ಪಂದ್ಯದ ವೇಳೆ ಕಾಣಲಿಲ್ಲ. ಮೇಲ್ಮನವಿಯನ್ನು ಹಿಂಪಡೆದದ್ದು ಬೌಲರ್‌ಗೆ ಮಾಡಿದ ಅಪಮಾನ. ಮೇಲ್ಮನವಿಗೂ ಮುನ್ನ ಚರ್ಚಿಸಿದ್ದರೇ, ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ, ಕೋಟ್ಯಂತರ ಜನರ ಎದುರು ಯುವ ಆಟಗಾರರು ಮೂದಲಿಕೆಗೊಳಗಾಗುವುದು ನಿಲ್ಲಬೇಕು. ನಾವು ಯಾರಿಗಾದರೂ ಹಾಗೆ ಮಾಡುತ್ತೇವೆಯೇ? ಬೌಲರ್‌ ಸಣ್ಣವರಂತೆ ಕಾಣಲು ಕಾರಣವೇನು? ಇದು ಖಂಡಿತಾ ಅಪಮಾನ' ಎಂದು ಅಶ್ವಿನ್ ಕಟುವಾಗಿ ಹೇಳಿದ್ದಾರೆ.

'ಹಾಗೆ ಮಾಡುವುದರಿಂದ, ಬೌಲರ್‌ ಮತ್ತೊಮ್ಮೆ ಅಂತಹ ಪ್ರಯತ್ನಕ್ಕೆ ಮುಂದಾಗುವುದಿಲ್ಲ. ಇನ್ನೊಮ್ಮೆ ಆ ರೀತಿ ಔಟ್‌ ಮಾಡಬಾರದು ಎಂದು ಜನರೂ ಹೇಳುತ್ತಾರೆ. ಹಾಗೆ ಮಾಡಬಾರದೇಕೆ? ಅಂತಹ ನಿಯಮವೇನು ಇಲ್ಲ. ಬ್ಯಾಟರ್‌, ಹೆಚ್ಚುವರಿ ಹೆಜ್ಜೆ ಇಡುವುದರಿಂದ ಸುಲಭವಾಗಿ ಎರಡು ರನ್‌ ಪೂರೈಸುವ ಅವಕಾಶ ಸಿಗುತ್ತದೆ' ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT