ಭಾರತೀಯ ಮಹಿಳಾ ಕ್ರಿಕೆಟ್ ಇದೀಗ ಹೊಸ ಯುಗವನ್ನು ಪ್ರವೇಶಿಸಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳೆಯರ ತಂಡವು ಚೊಚ್ಚಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಗೆದ್ದಿತು. ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿದ ಈ ಗೆಲುವು ಇಡೀ ಭಾರತವನ್ನು ಸಂಭ್ರಮಿಸುವಂತೆ ಮಾಡಿತು. ಕಿಕ್ಕಿರಿದು ತುಂಬಿದ್ದ ಡಿವೈ ಪಾಟೀಲ್ ಕ್ರೀಡಾಂಗಣವು ಹಿಂದೆಂದೂ ಕಾಣದ ರೀತಿಯಲ್ಲಿ ಘರ್ಜಿಸಿತು ಮತ್ತು ಹಲವಾರು ಮಂದಿ ಆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದವು.
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ನೀತಾ ಅಂಬಾನಿ ಮತ್ತು ಅವರ ಮಗ ಆಕಾಶ್ ಅಂಬಾನಿ ಅವರಂತಹವರು ಹಾಜರಿದ್ದರು. ವುಮೆನ್ ಇನ್ ಬ್ಲೂ ತಂಡವನ್ನು ಬೆಂಬಲಿಸಿದರು. ರೋಮಾಂಚಕಾರಿ ಫೈನಲ್‌ನಲ್ಲಿ, ಎಲ್ಲ ಪ್ರಸಿದ್ಧ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಈ ಮಧ್ಯೆ, ಒಂದು ಕ್ಷಣ ಎಲ್ಲರ ಗಮನ ಸೆಳೆಯಿತು. ಹರ್ಮನ್‌ಪ್ರೀತ್ ಕೌರ್ ಪಡೆಯು ಗೆಲುವು ಸಾಧಿಸಿದ ಬಳಿಕ ರೋಹಿತ್ ಶರ್ಮಾ ಅವರು ಭಾವನಾತ್ಮಕವಾಗಿ ಕಾಣಿಸಿಕೊಂಡರು. ಭಾರತ ತಂಡದ ಮಾಜಿ ನಾಯಕನ ಕಣ್ಣುಗಳು ತೇವಗೊಂಡಿದ್ದವು.
ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ವಿಶೇಷ ಆಹ್ವಾನಿತರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಹಿಟ್‌ಮ್ಯಾನ್ ಕ್ರೀಡಾಂಗಣದಲ್ಲಿದ್ದು, ತಂಡಕ್ಕೆ ಬೆಂಬಲ ನೀಡಿದರು ಮತ್ತು ತನ್ನ ಕುಟುಂಬದೊಂದಿಗೆ ಇಡೀ ಪಂದ್ಯವನ್ನು ವೀಕ್ಷಿಸಿದರು. ನಾಲ್ಕು ದಶಕಗಳ ಬಳಿಕ ಮಹಿಳಾ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಗ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ರೋಹಿತ್, ತುಂಬಾ ಭಾವನಾತ್ಮಕವಾಗಿ ಕಾಣಿಸಿಕೊಂಡರು.
ಕನಸಾಗಿಯೇ ಉಳಿದ ರೋಹಿತ್‌ರ ಏಕದಿನ ವಿಶ್ವಕಪ್ ಗೆಲುವು
ರೋಹಿತ್ ಶರ್ಮಾ ಅವರನ್ನು ಭಾರತದ ಅತ್ಯಂತ ಸಾಧನೆಗೈದ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಭಾರತ ತಂಡವನ್ನು 2024ರ ಟಿ20 ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದರು ಮತ್ತು ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರು. ಅವರು 2013ರಲ್ಲಿ ಆಟಗಾರನಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಭಾಗವಾಗಿದ್ದರು ಮತ್ತು ಅನೇಕ ಏಷ್ಯಾ ಕಪ್‌ಗಳನ್ನು ಸಹ ಗೆದ್ದಿದ್ದಾರೆ. ಆದಾಗ್ಯೂ, ಅವರು ಏಕದಿನ ವಿಶ್ವಕಪ್ ಅನ್ನು ಗೆಲ್ಲಲು ಸಾಧ್ಯವಾಗಿಲ್ಲ. 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸೋತಿತು.
ಆ ಕ್ಷಣ ರೋಹಿತ್ ಮತ್ತು ಇಡೀ ಭಾರತವೇ ಎದೆಗುಂದುವಂತೆ ಮಾಡಿತು. ಆ ಟೂರ್ನಮೆಂಟ್‌ನಲ್ಲಿ ರೋಹಿತ್ ತಂಡ ಅಜೇಯವಾಗಿ ಕಾಣುತ್ತಿತ್ತು. ಆದರೆ, ಟ್ರಾವಿಸ್ ಹೆಡ್ ತಮ್ಮ ತಂಡದ ಗೆಲವಿಗೆ ಕಾರಣರಾದರು. ಈಗ ಟೆಸ್ಟ್ ಮತ್ತು ಟಿ20ಐಗಳಿಂದ ನಿವೃತ್ತಿ ಹೊಂದಿರುವ ರೋಹಿತ್ ಅವರ ಏಕೈಕ ಕನಸು ಏಕದಿನ ವಿಶ್ವಕಪ್ ಗೆಲ್ಲುವುದು. ಅದಕ್ಕಾಗಿ ಅವರು 2027ರವರೆಗೆ ಕಾಯಬೇಕಿದೆ. ಇತ್ತೀಚೆಗೆ ಆಸೀಸ್ ವಿರುದ್ಧದ 3-ಏಕದಿನ ಪಂದ್ಯಗಳಲ್ಲಿ ಅವರು ಪ್ಲೇಯರ್ ಆಫ್ ದ ಸೀರೀಸ್ ಪ್ರಶಸ್ತಿ ಗೆದ್ದರು.