ಟೀಂ ಇಂಡಿಯಾ ತಂಡದಿಂದ ಮೊಹಮ್ಮದ್ ಶಮಿ ಹೆಸರನ್ನು ಮತ್ತೆ ಕೈಬಿಟ್ಟಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಅನುಭವಿ ವೇಗಿ ಈ ಆವೃತ್ತಿಯ ಮೊದಲ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರೂ, ಭಾರತದ ಟೆಸ್ಟ್ ತಂಡ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶಮಿ ಅವರ ತರಬೇತುದಾರ ಮೊಹಮ್ಮದ್ ಬದ್ರುದ್ದೀನ್, ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ವೇಗದ ಬೌಲರ್‌ಗಳಲ್ಲಿ ಒಬ್ಬರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಶಮಿ ಕೊನೆಯ ಬಾರಿಗೆ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ಪರ ಆಡಿದ್ದರು. ಅಂದಿನಿಂದ, ಅವರ ರೆಡ್-ಬಾಲ್ ವೃತ್ತಿಜೀವನ ವಿರಾಮದಲ್ಲಿದೆ. ಗಾಯದಿಂದಾಗಿ ಅವರು 2024ರಲ್ಲಿ ಹೆಚ್ಚಿನ ಸಮಯ ಹೊರಗುಳಿದಿದ್ದರು ಮತ್ತು ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಸರಣಿ ಸಮಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ಬಳಿಕ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದರು. ಆ ಪಂದ್ಯಾವಳಿಯಲ್ಲಿ ಅವರು ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದರೂ, ಐಪಿಎಲ್ 2025ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪರ ಆಡಿದರು. ಆದರೆ, ಉತ್ತಮ ಪ್ರದರ್ಶನ ನೀಡಲಿಲ್ಲ. ಒಂಬತ್ತು ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ಗಳನ್ನು ಪಡೆದರು.
ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಶಮಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಳಿಂದ ಶಮಿ ಹೊರಗುಳಿದಿದ್ದರು ಮತ್ತು ಈಗ ಭಾರತ ಎ ತಂಡದಲ್ಲಿಯೂ ಸ್ಥಾನ ಪಡೆದಿಲ್ಲ. ಬಂಗಾಳ ಪರ ರಣಜಿ ಟ್ರೋಫಿಯಲ್ಲಿ ಅವರು ನಿರಂತರವಾಗಿ ಬೌಲಿಂಗ್ ಮಾಡುತ್ತಿದ್ದರೂ, ಸಹ ಅವರನ್ನು ಹೊರಗಿಡಲಾಗಿದೆ ಎಂಬುದು ಇನ್ನೂ ಕಳವಳಕಾರಿ ಸಂಗತಿ.
ಶಮಿಗೆ ಆರಂಭಿಕ ದಿನಗಳಿಂದಲೂ ತರಬೇತಿ ನೀಡುತ್ತಿರುವ ಬದ್ರುದ್ದೀನ್, ಕಥೆಯಲ್ಲಿ ಇನ್ನೂ ಹೆಚ್ಚಿನದಿದೆ. ಅವರು (ಬಿಸಿಸಿಐ ಮತ್ತು ಅಜಿತ್ ಅಗರ್ಕರ್) ಶಮಿ ಅವರನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನನಗೆ ಅರ್ಥವಾಗುವ ಬೇರೆ ಯಾವುದೇ ಕಾರಣವಿಲ್ಲ. ಒಬ್ಬ ಆಟಗಾರ ಟೆಸ್ಟ್ ಮಟ್ಟದ ಕ್ರಿಕೆಟ್ ಆಡುತ್ತಿರುವಾಗ, ಎರಡು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಾಗ, ಅವನು ಎಲ್ಲಿಂದಲೂ ಅನರ್ಹನಾಗಿ ಕಾಣುವುದಿಲ್ಲ. ಆಯ್ಕೆದಾರರು ಅವರನ್ನು ಕಡೆಗಣಿಸುತ್ತಿದ್ದಾರೆ, ಅಷ್ಟೇ' ಎಂದು ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
'ಈಗಿನ ಪರಿಸ್ಥಿತಿಯು ಶಮಿ ಮೇಲೆ ಪರಿಣಾಮ ಬೀರಿದೆ. ಖಂಡಿತ, ಅವರು ತೊಂದರೆಗೀಡಾಗಿದ್ದಾರೆ. ನೀವು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಮತ್ತು ಇನ್ನೂ ತಂಡಕ್ಕೆ ಆಯ್ಕೆಯಾಗದಿದ್ದರೆ, ಅದು ಯಾರಿಗೆ ಆದರೂ ನಿರಾಶಾದಾಯಕವಾಗಿರುತ್ತದೆ. ಆದಾಗ್ಯೂ, 35 ವರ್ಷದ ಆಟಗಾರ ಮತ್ತೆ ಪುಟಿದೇಳುತ್ತಾರೆ ಎಂಬ ವಿಶ್ವಾಸವಿದೆ. ಅವರು ಅಂತಹ ಕಂಬ್ಯಾಕ್ ಮಾಡುತ್ತಾರೆ, ಅದು ಎಲ್ಲರನ್ನೂ ಮೌನಗೊಳಿಸುತ್ತದೆ. ಅವರ ಫಾರ್ಮ್ ಹೊರತಾಗಿಯೂ ನೀವು ಈಗ ಅವರನ್ನು ಆಯ್ಕೆ ಮಾಡದಿದ್ದರೆ, ಆಟಾಗರನ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡುತ್ತೀರಿ ಎಂದು ಹೇಳುವುದನ್ನು ನಿಲ್ಲಿಸಿ' ಎಂದರು.