ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ 2025 ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದಿದ್ದು, ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದಾಗ್ಯೂ, ಭಾರತೀಯ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರು ಹರ್ಮನ್‌ಪ್ರೀತ್ ಕೌರ್ ಮತ್ತು ತಂಡಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭರವಸೆ ನೀಡಿದ್ದ ನಗದು ಬಹುಮಾನ ಅಥವಾ ಪ್ರಾಯೋಜಕತ್ವದ ಒಪ್ಪಂದಗಳು ಬಾರದಿದ್ದರೆ ನಿರಾಶೆಗೊಳ್ಳಬೇಡಿ ಎಂದಿದ್ದಾರೆ.
ಭಾರತ ತಂಡವು ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಗೆದ್ದಾಗಿನಿಂದ, ಅಭೂತಪೂರ್ವ ನಗದು ಬಹುಮಾನಗಳು ಮತ್ತು ಮನ್ನಣೆಗಳು ಅವರನ್ನು ಅರಸಿಕೊಂಡು ಬಂದಿವೆ. ಐಸಿಸಿಯಿಂದ ತಂಡಕ್ಕೆ 40 ಕೋಟಿ ರೂ. ಬಹುಮಾನದ ಜೊತೆಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 51 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ.
ಹಲವಾರು ರಾಜ್ಯ ಸರ್ಕಾರಗಳು ರಿಚಾ ಘೋಷ್, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್ ಮುಂತಾದ ಆಟಗಾರ್ತಿಯರಿಗೆ ನಗದು ಬಹುಮಾನಗಳನ್ನು ನೀಡುವುದಾಗಿ ಭರವಸೆ ನೀಡಿವೆ. ಈ ವೇಳೆ, ಭರವಸೆ ನೀಡಿದ ಪೈಕಿ ಕೆಲವು ಬಹುಮಾನಗಳು ತಮ್ಮ ಕೈಗೆ ಸಿಗದಿದ್ದರೆ ತಂಡವು ನಿರಾಶೆಗೊಳ್ಳಬಾರದು ಎಂದು ಗವಾಸ್ಕರ್ ಹೇಳಿದ್ದಾರೆ. 1983 ರಲ್ಲಿ ಭಾರತೀಯ ಪುರುಷರ ತಂಡ ವಿಶ್ವಕಪ್ ಗೆದ್ದಾಗಿನ ತಮ್ಮ ಸ್ವಂತ ಅನುಭವದಿಂದ ಅವರು ಹೀಗೆ ಹೇಳಿದ್ದಾರೆ.
'ತಂಡದ ಆಟಗಾರ್ತಿಯರಿಗೆ ಒಂದು ಎಚ್ಚರಿಕೆ. ಭರವಸೆ ನೀಡಿದಂತೆ ಕೆಲವು ಬಹುಮಾನಗಳು ನಿಮಗೆ ಬಾರದಿದ್ದರೆ ದಯವಿಟ್ಟು ನಿರಾಶೆಗೊಳ್ಳಬೇಡಿ. ಭಾರತದಲ್ಲಿ, ಜಾಹೀರಾತುದಾರರು, ಬ್ರ್ಯಾಂಡ್‌ಗಳು ಮತ್ತು ಕೆಲವು ವ್ಯಕ್ತಿಗಳು ಬಹಳ ಬೇಗ ತಂಡದ ಯಶಸ್ಸಿನಲ್ಲಿ ಧುಮುಕುತ್ತಾರೆ ಮತ್ತು ವಿಜೇತರನ್ನು ಮುಂದಿಟ್ಟುಕೊಂಡು ಬಿಟ್ಟಿ ಪ್ರಚಾರ ಪಡೆಯಲು ಪ್ರಯತ್ನಿಸುತ್ತಾರೆ. ತಂಡ ಅಥವಾ ವೈಯಕ್ತಿಕ ಆಟಗಾರರ ಪ್ರಾಯೋಜಕರಲ್ಲದೆ, ತಂಡವನ್ನು ಅಭಿನಂದಿಸುವ ಜಾಹೀರಾತು ಮತ್ತು ಹೋರ್ಡಿಂಗ್‌ಗಳನ್ನು ಹಾಕುವ ಬಹುತೇಕರು ತಮ್ಮ ಬ್ರ್ಯಾಂಡ್‌ಗಳನ್ನು ಅಥವಾ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಮಾಡುವ ಪ್ರಯತ್ನವಾಗಿರುತ್ತದೆ. ಅವರು ಭಾರತೀಯ ಕ್ರಿಕೆಟ್‌ಗೆ ವೈಭವವನ್ನು ತಂದವರಿಗೆ ಏನನ್ನೂ ನೀಡುವುದಿಲ್ಲ' ಎಂದು ಗವಾಸ್ಕರ್ ಮಿಡ್-ಡೇಗಾಗಿ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
1983ರ ವಿಶ್ವಕಪ್ ವಿಜೇತ ಪುರುಷರ ಭಾರತೀಯ ತಂಡಕ್ಕೆ ಇದೇ ರೀತಿಯ ಅನೇಕ ಭರವಸೆಗಳನ್ನು ನೀಡಲಾಗಿತ್ತು. ಆದರೆ, ಅವುಗಳಲ್ಲಿ ಕೆಲವು ಎಂದಿಗೂ ಈಡೇರಲಿಲ್ಲ. ತಂಡದ ಯಶಸ್ಸನ್ನು ಆಚರಿಸುವ ನಿಜವಾದ ಯಾವುದೇ ಉದ್ದೇಶವಿಲ್ಲದೆ, ತಂಡದ ವಿಶ್ವಕಪ್ ಗೆಲುವನ್ನು ತಮ್ಮ ವ್ಯವಹಾರವನ್ನು ಪ್ರಚಾರ ಮಾಡಲು ಬಳಸಿಕೊಂಡ ಬ್ರ್ಯಾಂಡ್‌ಗಳ ವಿರುದ್ಧ ಗವಾಸ್ಕರ್ ಕಿಡಿಕಾರಿದರು.
'1983ರ ತಂಡಕ್ಕೂ ಸಹ ಹಲವು ಭರವಸೆಗಳನ್ನು ನೀಡಲಾಗಿತ್ತು ಮತ್ತು ಆಗ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬಂದವು. ಬಹುತೇಕ ಎಲ್ಲವೂ ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ. ಈ ವಿಚಾರದಲ್ಲಿ ಮಾಧ್ಯಮಗಳನ್ನು ದೂಷಿಸಲು ಆಗುವುದಿಲ್ಲ. ಏಕೆಂದರೆ, ಅವುಗಳು ಈ ನಾಚಿಕೆಯಿಲ್ಲದ ಜನರು ತಮ್ಮನ್ನೂ ಬಳಸುತ್ತಿದ್ದಾರೆಂದು ಅರಿತುಕೊಳ್ಳದೆ, ಘೋಷಣೆಗಳನ್ನು ಪ್ರಕಟಿಸಿದವು. ಆದ್ದರಿಂದ, ಆಟಗಾರ್ತಿಯರೇ, ಈ ನಾಚಿಕೆಯಿಲ್ಲದ ಜನರು ನಿಮ್ಮ ಗೆಲುವನ್ನು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಬಳಸುತ್ತಿದ್ದರೆ ಚಿಂತಿಸಬೇಡಿ' ಎಂದು ಹೇಳಿದರು.
ಭಾರತಕ್ಕಾಗಿ ಆಡುವುದರಿಂದ ಸಿಗುವ ಶ್ರೇಷ್ಠ ಪ್ರತಿಫಲವೆಂದರೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಸಿಗುವ ಶಾಶ್ವತ ಪ್ರೀತಿ ಮತ್ತು ಗೌರವವಾಗಿದೆ. 1983ರ ವಿಶ್ವಕಪ್ ವಿಜೇತ ತಂಡದ ಆಟಗಾರರು ದಶಕಗಳ ನಂತರವೂ ಅಭಿಮಾನಿಗಳಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಾರೆ. ನೀವು ನಿವೃತ್ತರಾದಾಗಲೂ ಅದೇ ರೀತಿ ಆಗುತ್ತದೆ. ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು. ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಜೈ ಹಿಂದ್ ಎಂದು ತಿಳಿಸಿದ್ದಾರೆ.