ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಭಾರತದ ಬ್ಯಾಟಿಂಗ್ ಘಟಕ ವೈಫಲ್ಯ ಕಂಡಿದ್ದು, ಮೊದಲ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ 288 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಭಾರತದ ಪರ ಯಶಸ್ವಿ ಜೈಸ್ವಾಲ್ 58 ರನ್ ಹಾಗೂ ವಾಷಿಂಗ್ಟನ್ ಸುಂದರ್ 48 ರನ್ ಗಳಿಸಿದ್ದು ಬಿಟ್ಟರೆ, ಬೇರೆ ಯಾವುದೇ ಬ್ಯಾಟರ್ ರನ್ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.
ಈ ಬೆನ್ನಲ್ಲೇ ಕನ್ನಡಿಗ ಕರುಣ್ ನಾಯರ್ ಬಿಸಿಸಿಐ ಮತ್ತು ಆಯ್ಕೆದಾರರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸರಣಿಯಲ್ಲಿ ಈಗಾಗಲೇ 0-1 ಹಿನ್ನಡೆಯಲ್ಲಿದ್ದ ಭಾರತ, ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಎಡವಿದೆ.
ಯಶಸ್ವಿ ಜೈಸ್ವಾಲ್ ಔಟ್ ಆದ ಬಳಿಕ ಮುಂದಿನ ಐದು ವಿಕೆಟ್‌ಗಳು ಕೇವಲ 27 ರನ್ ಅಂತರದಲ್ಲಿ ಪತನಗೊಂಡಿವೆ. 65/0 ರಿಂದ, ಆತಿಥೇಯರು 122 ಕಲೆಹಾಕುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದ್ದರು. ಇದು ಭಾರಿ ಮುಜುಗರದ ಸಂಗತಿಯಾಗಿತ್ತು. ಭಾರತದ ಪ್ರದರ್ಶನದ ಬಗ್ಗೆ ಎಲ್ಲರೂ ಚಿಂತೆಗೀಡಾಗಿದ್ದಾಗ, ಕರುಣ್ ನಾಯರ್ ಪರೋಕ್ಷವಾಗಿ ಟೀಕಿಸಿದ್ದಾರೆ.
'ಕೆಲವು ಪರಿಸ್ಥಿತಿಗಳು ನಿಮಗೆ ಹೃದಯದಿಂದ ಪರಿಚಿತವಿರುವ ಭಾವನೆಯನ್ನು ಹೊಂದಿರುತ್ತವೆ - ಮತ್ತು ಆ ಘಟನೆಯ ಭಾಗವಾಗದಿರುವುದು ಅಥವಾ ಏನನ್ನಾದರೂ ಕಳೆದುಕೊಳ್ಳುವ ಆ ಶಾಂತ ಭಾವನೆಯು ನೋವನ್ನು ಹೆಚ್ಚಿಸುತ್ತದೆ' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.