ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತದಂತಹ ಲಕ್ಷಣಗಳು ಕಾಣಿಸಿಕೊಂಡ ಕಾರಣ ಭಾನುವಾರ ಅವರ ವಿವಾಹ ಸಮಾರಂಭವನ್ನು ಮುಂದೂಡಬೇಕಾಯಿತು. ಈ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸ್ಮೃತಿ ಅವರ ತಂದೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕುಟುಂಬದಲ್ಲಿ ಎರಗಿದ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಮದುವೆಯನ್ನು ಸದ್ಯ ಮುಂದೂಡಲಾಗಿದೆ. ತನ್ನ ತಂದೆಯ ಅನುಪಸ್ಥಿತಿಯಲ್ಲಿ ಮದುವೆ ಮಾಡಿಕೊಳ್ಳಲು ಸ್ಮೃತಿ ನಿರಾಕರಿಸಿದ್ದರಿಂದ ಮದುವೆ ಸ್ಥಗಿತಗೊಂಡಿದೆ.
ಇದೀಗ ಸ್ಮೃತಿ ಅವರ ಭಾವಿ ಪತಿ ಪಲಾಶ್ ಮುಚ್ಚಲ್ ಅವರ ಆರೋಗ್ಯ ಕೂಡ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ತಿಳಿದುಬಂದಿದೆ.
ವೈರಲ್ ಸೋಂಕು ಮತ್ತು ಹೆಚ್ಚಿದ ಅಸಿಡಿಟಿಯಿಂದಾಗಿ ಪಲಾಶ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾಯಿತು ಎಂದು NDTVಗೆ ಮೂಲಗಳು ದೃಢಪಡಿಸಿವೆ. ಆದಾಗ್ಯೂ, ಸಮಸ್ಯೆ ಗಂಭೀರವಾಗಿರಲಿಲ್ಲ. ಚಿಕಿತ್ಸೆ ಪಡೆದ ನಂತರ, ಪಲಾಶ್ ಈಗಾಗಲೇ ಆಸ್ಪತ್ರೆಯಿಂದ ಹೋಟೆಲ್‌ಗೆ ತೆರಳಿದ್ದಾರೆ ಎನ್ನಲಾಗಿದೆ.
ಸ್ಮೃತಿ ಮಂಧಾನ ತಂದೆ ಆರೋಗ್ಯ
ಸ್ಮೃತಿ ಮಂಧಾನ ಅವರ ಕುಟುಂಬದ ವೈದ್ಯ ಡಾ. ನಮನ್ ಶಾ ಅವರು, ವೈದ್ಯಕೀಯ ತಂಡವು ಅವರ ತಂದೆಯ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಮಂಧಾನ ಅವರಿಗೆ ಅಗತ್ಯವಿರುವ ಪ್ರಗತಿ ಕಂಡುಬಂದರೆ, ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ತಿಳಿಸಿದ್ದಾರೆ.
'ಮಧ್ಯಾಹ್ನ 1.30ರ ಸುಮಾರಿಗೆ, ಶ್ರೀನಿವಾಸ್ ಮಂಧಾನ ಅವರಿಗೆ ಎಡಭಾಗದ ಎದೆ ನೋವು ಕಾಣಿಸಿಕೊಂಡಿತು. ನಾವು ಅದನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಆಂಜಿನಾ' ಎಂದು ಕರೆಯುತ್ತೇವೆ. ಈ ಲಕ್ಷಣಗಳು ಕಾಣಿಸಿಕೊಂಡ ಬಳಿಕ, ಅವರ ಮಗ ನನಗೆ ಕರೆ ಮಾಡಿದರು. ನಾವು ಆಂಬ್ಯುಲೆನ್ಸ್ ಕಳುಹಿಸಿದೆವು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಸಿಜಿ ಮತ್ತು ಇತರ ವರದಿಗಳಲ್ಲಿ ಹೃದಯ ಕಿಣ್ವಗಳು ಹೆಚ್ಚಿವೆ ಎಂಬುದು ಪತ್ತೆಯಾಗಿದೆ. ಆದ್ದರಿಂದ ನಾವು ಅವರನ್ನು ವೀಕ್ಷಣೆಯಲ್ಲಿ ಇಡಬೇಕಾಗಿದೆ' ಎಂದು ಅವರು ಪಿಟಿಐಗೆ ತಿಳಿಸಿದರು.
'ರಕ್ತದೊತ್ತಡವೂ ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಇಡೀ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ. ಪರಿಸ್ಥಿತಿ ಹದಗೆಟ್ಟರೆ, ನಾವು ಆಂಜಿಯೋಗ್ರಫಿ ಮಾಡಬೇಕಾಗುತ್ತದೆ. ಸ್ಮೃತಿ ಮತ್ತು ಅವರ ಕುಟುಂಬ ನಮ್ಮೊಂದಿಗೆ ಸಂಪರ್ಕದಲ್ಲಿದೆ' ಎಂದರು.
ನೆನ್ನೆ ಸ್ಮೃತಿ ಅವರ ಬಹುನಿರೀಕ್ಷಿತ ವಿವಾಹ ನಡೆಯಬೇಕಿತ್ತು. ಈಗಾಗಲೇ ಕಳೆದೊಂದು ವಾರದಿಂದ ಭಾರತೀಯ ಕ್ರಿಕೆಟ್ ತಂಡದ ತಾರೆಯ ತವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹದ ಆಚರಣೆಗಳು ನಡೆಯುತ್ತಿದ್ದವು. ತಂದೆಯ ಅನಾರೋಗ್ಯ ಹಿನ್ನೆಲೆಯಲ್ಲಿ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.