ಗುವಾಹತಿ: ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಭಗದ್ರಕೋಟೆಯಾಗಿದ್ದ ತವರಿನಲ್ಲೇ ಭಾರತ ಹೀನಾಯ ಪ್ರದರ್ಶನ ತೋರಿ ದಕ್ಷಿಣ ಆಫ್ರಿಕಾ ವಿರುದ್ಧವೂ ಮುಖಭಂಗ ಎದುರಿಸಿದ್ದು, ಇದಕ್ಕೆ ಕೋಚ್ ಗೌತಮ್ ಗಂಭೀರ್ ಅವರೇ ಕಾರಣ ಎಂದು ಪ್ರೇಕ್ಷಕರು ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಗುವಾಹತಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ಇಂದು ಅಂತ್ಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ವಿರುದ್ಧ 408 ರನ್ ಗಲ ಹೀನಾಯ ಸೋಲುಕಂಡಿತು. ಈ ಮೂಲಕ ಭಾರತ ತವರಿನಲ್ಲೇ ಅತೀ ದೊಡ್ಡ ಹೀನಾಯ ಸೋಲು ಕಂಡಿತು. ಭಾರತದ ವಿರುದ್ಧ ತಂಡವೊಂದು ಭಾರತದಲ್ಲಿ ಗಳಿಸಿದ ಅತ್ಯಂತ ದೊಡ್ಡ ಗೆಲುವು ಇದಾಗಿದೆ.
ಗುವಾಹತಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 548 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಕೇವಲ 140 ರನ್ ಗಳಿಗೇ ಆಲೌಟ್ ಆಗುವ ಮೂಲಕ ಬರೊಬ್ಬರಿ 408 ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.
ಈ ಮೂಲಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕು ಎಂಬ ದಕ್ಷಿಣ ಆಫ್ರಿಕಾ ಕನಸು ಕೊನೆಗೂ ನನಸಾಗಿದ್ದು, ಬರೊಬ್ಬರಿ 26 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಹಿಂದೆ ಅಂದರೆ 1999ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆದ್ದಿತ್ತು.
ಗೌತಮ್ ಗಂಭೀರ್ ವಿರುದ್ಧ ಧಿಕ್ಕಾರ ಕೂಗಿದ ಪ್ರೇಕ್ಷಕರು
ಇನ್ನು ಇಂದಿನ ಪಂದ್ಯ ಮುಕ್ತಾಯವಾಗುತ್ತಲೇ ಆಟಗಾರರ ಹಸ್ತಲಾಘವ ಪ್ರಕ್ರಿಯೆ ವೇಳೆ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಗೌತಮ್ ಗಂಭೀರ್ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.
Gautam Gambhir Hay Hay.. ಗೌತಮ್ ಗಂಭೀರ್ ಧಿಕ್ಕಾರ ಎಂದು ಕೂಗುತ್ತಿದ್ದರು. ಅಲ್ಲದೆ ಟೆಸ್ಟ್ ಕ್ರಿಕೆಟ್ ನ ಭಾರತದ ಭದ್ರಕೋಟೆ ಛಿದ್ರವಾಗಲು ನೀವೇ ಕಾರಣ ಎಂದು ಕಿಡಿಕಾರಿದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.