ಅಹ್ಮದಾಬಾದ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಬೆನ್ನಲ್ಲೇ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ಆರಂಭವಾಗಿದ್ದು, ಮೊದಲ ಟೆಸ್ಟ್ ನ ಮೊದಲ ದಿನವೇ ಭಾರತ ಮಾರಕ ಬೌಲಿಂಗ್ ದಾಳಿ ಸಂಘಟಿಸಿದೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಇಂದು ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ರೋಸ್ಟನ್ ಚೇಸ್ ಬಳಗ ಭಾರತದ ವೇಗಿ ಮಹಮದ್ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿದ್ದು, ಭೋಜನ ವಿರಾಮದ ವೇಳೆಗೆ ಕೇವಲ 90 ರನ್ ಪೇರಿಸಿ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ವೆಸ್ಟ್ ಇಂಡೀಸ್ ನ ಮೊದಲ ಇನ್ನಿಂಗ್ಸ್ ನ 4ನೇ ಓವರ್ ನಲ್ಲೇ ಸಿರಾಜ್ ಭಾರತಕ್ಕೆ ಮೇಲುಗೈ ಒದಗಿಸಿದರು. ವಿಂಡೀಸ್ ಆರಂಭಿಕ ಆಟಗಾರ ಟಗೆನರೀನ್ ಚಂದ್ರಪಾಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭಾರತಕ್ಕೆ ಶುಭಾರಂಭ ಒದಗಿಸಿದರು.
ಬಳಿಕ 8 ರನ್ ಗಳಿಸಿದ್ದ ಕ್ಯಾಂಬೆಲ್ ರನ್ನು ಬುಮ್ರಾ ಔಟ್ ಮಾಡಿದರೆ, 2ನೇ ಕ್ರಮಾಂಕದಲ್ಲಿ ಬಂದು 12 ರನ್ ಗಳಿಸಿದ್ದ ಅಲಿಕ್ ಅಥನಾಜೆ ಮತ್ತು ಬ್ರಾಂಡನ್ ಕಿಂಗ್ 13 ರನ್ ಗಳಿಸಿ ಸಿರಾಜ್ ಬೌಲಿಂಗ್ ನಲ್ಲಿ ಔಟಾದರು.
ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಂತೆ ಕುಲದೀಪ್ ಯಾದವ್ 26 ರನ್ ಗಳಿಸಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಶಾಯ್ ಹೋಪ್ ರನ್ನು ಕ್ಲೀನ್ ಬೋಲ್ಡ್ ಮಾಡಿದರು.
ಇನ್ನು ಭಾರತದ ಪರ ಮಹಮದ್ ಸಿರಾಜ್ 3 ವಿಕೆಟ್ ಪಡೆದರೆ, ಬುಮ್ರಾ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ. 5 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿರುವ ವೆಸ್ಟ್ ಇಂಡೀಸ್ ಪರ ನಾಯಕ ರೋಸ್ಟನ್ ಚೇಸ್ 22 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.