ಅಹ್ಮದಾಬಾದ್: ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯ ಭಾರತ ಬೃಹತ್ ಮುನ್ನಡೆಯತ್ತ ಹೆಜ್ಜೆ ಇಟ್ಟಿದ್ದು, ಭಾರತದ ಇನ್ನಿಂಗ್ಸ್ ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದ್ರುವ್ ಜುರೆಲ್ ಶತಕ ಪ್ರಮುಖ ಪಾತ್ರ ನಿರ್ವಹಿಸಿದೆ.
ಹೌದು.. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಸಂಪೂರ್ಣ ಹಿಡಿತ ಸಾಧಿಸಿದ್ದು, 2ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 448/5 ಗಳಿಸಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಭಾರತದ ಪರ ಅನುಭವಿ ಆಟಗಾರರಾದ ಕೆ.ಎಲ್. ರಾಹುಲ್, ರವೀಂದ್ರ ಜಡೇಜ ಹಾಗೂ ಯುವ ಆಟಗಾರ ಧ್ರುವ ಜುರೇಲ್ ಅಮೋಘ ಶತಕ ಸಿಡಿಸಿ ಮಿಂಚಿದರು. ನಾಯಕ ಶುಭಮನ್ ಗಿಲ್ (50 ರನ್) ಅವರೂ ಜವಾಬ್ದಾರಿಯುತ ಅರ್ಧಶತಕ ಗಳಿಸಿದ್ದರ ಫಲವಾಗಿ ಟೀಂ ಇಂಡಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಗಳಿಸಿದೆ.
ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವಿಂಡೀಸ್ ಪಡೆ, ಮೊಹಮದ್ ಸಿರಾಜ್ (4 ವಿಕೆಟ್) ಹಾಗೂ ಜಸ್‌ಪ್ರೀತ್ ಬೂಮ್ರಾ (3 ವಿಕೆಟ್) ದಾಳಿ ಎದುರು ತತ್ತರಿಸಿತು. ಅವರಿಗೆ ಕುಲದೀಪ್ ಯಾದವ್ (2 ವಿಕೆಟ್) ಮತ್ತು ವಾಷಿಂಗ್ಟನ್ ಸುಂದರ್ (1 ವಿಕೆಟ್) ಕೂಡ ಉತ್ತಮ ಸಹಕಾರ ನೀಡಿದರು. ಹೀಗಾಗಿ, ಪ್ರವಾಸಿ ಪಡೆ 162 ರನ್ ಗಳಿಸಿ ಮೊದಲ ದಿನವೇ ಆಲೌಟ್ ಆಯಿತು. ಭಾರತ ಸದ್ಯ 286 ರನ್‌ಗಳ ಮುನ್ನಡೆ ಸಾಧಿಸಿದೆ.
ಆಯ್ಕೆದಾರರಿಗೆ Dhruv Jurel ಸಂದೇಶ
ಇನ್ನು ಇಂದಿನ ತಮ್ಮ ಭರ್ಜರಿ ಪ್ರದರ್ಶನದ ಮೂಲಕ ಯುವ ವಿಕೆಟ್ ಕೀಪರ್ ಬ್ಯಾಟರ್ ಧುರ್ವ್ ಜುರೆಲ್ ಟೀಂ ಇಂಡಿಯಾ ಆಯ್ಕೆದಾರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ತಂಡದಲ್ಲಿ ಈಗಾಗಲೇ ರಿಷಬ್ ಪಂತ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ರಂತಹ ವಿಕೆಟ್ ಕೀಪರ್ ಬ್ಯಾಟರ್ ಗಳು ತಮ್ಮ ಸ್ಥಾನ ಗಟ್ಟಿಪಡಿಸಿಕೊಳ್ಳಲು ಹೋರಾಡುತ್ತಿದ್ದರೆ ಈ ಪಟ್ಟಿಗೆ ಇದೀಗ ಉದಯೋನ್ಮುಖ ಆಟಗಾರ ದ್ರುವ್ ಜುರೆಲ್ ಕೂಡ ಸೇರ್ಪಡೆಯಾಗಿದ್ದಾರೆ.
ರಿಷಬ್ ಪಂತ್ ಗಾಯದ ಸಮಸ್ಯೆಯಿಂದ ತಂಡದಿಂದ ದೂರವಿದ್ದು ಅವರ ಪರ್ಯಾಯ ಆಟಗಾರನಾಗಿ ಕಣಕ್ಕಿಳಿದಿದ್ದ ದ್ರುವ್ ಜುರೆಲ್ ವಿಂಡೀಸ್ ವಿರುದ್ದ ಶತಕ ಬಾರಿಸಿ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟರ್ ಪಾತ್ರಕ್ಕಾಗಿ ಇದೀಗ ಟೀಂ ಇಂಡಿಯಾದ ಬೆಂಚ್ ಸ್ಟ್ರೆಂತ್ ಮತ್ತಷ್ಟು ಹೆಚ್ಚಾಗಿದೆ.
ರಿಷಬ್ ಪಂತ್ ಗೆ ಸಂಕಷ್ಟ?
ಇನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಪ್ರಸ್ತುತ ಗಾಯಗೊಂಡು ತಂಡದಿಂದ ದೂರು ಉಳಿದಿದ್ದಾರೆ.
ಇದೇ ಸಂದರ್ಭದಲ್ಲಿ ದ್ರುವ್ ಜುರೆಲ್ ಪ್ರದರ್ಶನ ಆಯ್ಕೆದಾರರಿಗೆ ಮತ್ತೊಂದು ಆಯ್ಕೆ ಸೃಷ್ಟಿಸಿದಂತಿದೆ. ಮತ್ತೊಂದೆಡೆ ಕೆಎಲ್ ರಾಹುಲ್, ಸಂಜು ಸಾಮ್ಸನ್, ಇಶಾನ್ ಕಿಶನ್ ಕೂಡ ರೇಸ್ ನಲ್ಲಿರುವುದು ತಂಡಕ್ಕೆ ಸಕಾರಾತ್ಮಕ ಅಂಶವಾಗಿದೆ.