ನವದೆಹಲಿ: ಏಕದಿನ ಹಾಗೂ ಟಿ20 ಸರಣಿ ಒಳಗೊಂಡಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗಿದ್ದು, ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಶುಭ್ ಮನ್ ಗಿಲ್ ಆಯ್ಕೆಯಾಗಿದ್ದಾರೆ.
ಹೌದು.. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ತಂಡದ ನಾಯಕರಾಗಿದ್ದ ಶುಭ್ ಮನ್ ಗಿಲ್ ರನ್ನು ಏಕದಿನ ಕ್ರಿಕೆಟ್ ಗೂ ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡ ರಚಿಸಬೇಕಾದ ಒತ್ತಡ ಆಯ್ಕೆ ಸಮಿತಿ ಬೇಕಿತ್ತು. ಹಾಗಾಗಿ ತೀವ್ರ ಕುತೂಹ ಕೆರಳಿಸಿದ್ದ ಏಕದಿನ ತಂಡದ ಆಯ್ಕೆ ವಿಚಾರದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಳೆದು ತೂಗಿ ತಂಡ ಪ್ರಕಟಿಸಿದೆ.
ನಿರೀಕ್ಷೆಯಂತೆಯೇ ತಂಡದ ಹಿರಿಯ ಆಟಗಾರರಾದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್ ಆಗಿದ್ದು, ಶ್ರೇಯಸ್ ಅಯ್ಯರ್ ಗೆ ಏಕದಿನ ತಂಡದ ಉಪ ನಾಯಕ ಸ್ಥಾನ ನೀಡಲಾಗಿದೆ.
ಉಳಿದಂತೆ ಆಲ್ ರೌಂಡರ್ ಅಕ್ಸರ್ ಪಟೇಲ್ ಮತ್ತು ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ, ವಿಕೆಟ್ ಕೀಪರ್ ಬ್ಯಾಟರ್ ಪಾತ್ರದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಸ್ಪಿನ್ನರ್ ಗಳ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಸ್ಥಾನಗಳಿಸಿದ್ದಾರೆ.
ವೇಗಿಗಳ ವಿಭಾಗದಲ್ಲಿ ಹರ್ಷಿತ್ ರಾಣಾ, ಮಹಮದ್ ಸಿರಾಜ್, ಅರ್ಶ್ ದೀಪ್ ಸಿಂಗ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದರೆ, ಪರ್ಯಾಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಧ್ರುವ್ ಜುರೆಲ್, ಹೆಚ್ಚುವರಿ ಬ್ಯಾಟರ್ ಆಗಿ ಯಶಸ್ವಿ ಜೈಸ್ವಾಲ್ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರವೀಂದ್ರ ಜಡೇಜಾ, ಜಸ್ ಪ್ರೀತ್ ಬುಮ್ರಾಗೆ ವಿಶ್ರಾಂತಿ
ಇನ್ನು ತಂಡದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಟಿ20 ತಂಡ
ಇನ್ನು ಟಿ20 ಸರಣಿಗಾಗಿ ಸೂರ್ಯ ಕುಮಾರ್ ಯಾದವ್ ನೇತತ್ವದ ತಂಡ ಪ್ರಕಟಿಸಲಾಗಿದ್ದು, ಇಲ್ಲಿ ಶುಭ್ ಮನ್ ಗಿಲ್ ಉಪನಾಯಕರಾಗಿ ಮುಂದುವರೆದಿದ್ದಾರೆ. ಏಷ್ಯಾಕಪ್ ಟೂರ್ನಿ ಆಡಿದ್ದ ಬಹುತೇಕ ಅದೇ ತಂಡವನ್ನು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೂ ಉಳಿಸಿಕೊಳ್ಳಲಾಗಿದ್ದು, ಗಾಯಾಳು ಹಾರ್ದಿಕ್ ಪಾಂಡ್ಯಾ ತಂಡದಿಂದ ಮಿಸ್ ಆಗಿದ್ದಾರೆ.
ಉಳಿದಂತೆ ಅಭಿಷೇಕ್ ಶರ್ಮಾ, ಏಷ್ಯಾಕಪ್ ಫೈನಲ್ ಹೀರೋ ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರಣ್ ಚಕ್ರವರ್ತಿ, ಜಸ್ ಪ್ರೀತ್ ಬುಮ್ರಾ, ಅರ್ಶ್ ದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಟಿ20 ತಂಡದಲ್ಲಿದ್ದಾರೆ.