ಆಸ್ಟ್ರೇಲಿಯಾ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಜಯದ ಓಟ ಮುಂದುವರಿಸಿದ್ದು, ಭಾರತ ತಂಡದ ವಿರುದ್ಧ ಮೂರು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಭಾರತವು ಈಗ ಪಂದ್ಯಾವಳಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿದ್ದು, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಕಷ್ಟಪಡಬೇಕಾಗಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಮತ್ತು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ತಮ್ಮ ಉಳಿದ ಮೂರು ಪಂದ್ಯಗಳನ್ನೂ ಗೆಲ್ಲಬೇಕಿದೆ.
2025ರ ಮಹಿಳಾ ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ಸದ್ಯ ಮೂರನೇ ಸ್ಥಾನದಲ್ಲಿದ್ದು, ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಒಟ್ಟು 10 ಅಂಕಗಳನ್ನು ಗಳಿಸುತ್ತದೆ. ಮೂರು ಪಂದ್ಯಗಳಲ್ಲಿ ಭಾರತ ಗೆಲ್ಲದಿದ್ದರೂ ಕೂಡ, ಇತರ ಪಂದ್ಯಗಳ ಫಲಿತಾಂಶ ಕೂಡ ಭಾರತದ ಸೆಮಿಫೈನಲ್ ಕನಸಿಗೆ ನೆರವಾಗಬಹುದು.
ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ ಮತ್ತು ಆ ಪಂದ್ಯಗಳ ಫಲಿತಾಂಶಗಳು ಸೆಮಿಫೈನಲ್ ಓಟದ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತವೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು ನಾಲ್ಕನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಇನ್ನೂ ಎದುರಿಸಿಲ್ಲ. ಹೀಗಾಗಿ, ಭಾರತ ತನ್ನ ಉಳಿದಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದರೂ, ಇತರ ಪಂದ್ಯಗಳ ಫಲಿತಾಂಶಗಳು ಭಾರತಕ್ಕೆ ಅನುಕೂಲಕರವಾಗಬಹುದು. ಭಾರತ ಸದ್ಯ ತನ್ನ ಕೆಳಗಿನ ಪ್ರತಿಯೊಂದು ತಂಡಕ್ಕಿಂತ ಉತ್ತಮವಾದ ನೆಟ್ ರನ್-ರೇಟ್ ಅನ್ನು ಹೊಂದಿದೆ.
ಈಮಧ್ಯೆ, ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 330 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ಕೇವಲ 107 ಎಸೆತಗಳಲ್ಲಿ 142 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡದ ತಡವಾದ ಬ್ಯಾಟಿಂಗ್ ಕುಸಿತಕ್ಕೆ ವಿಷಾದ ವ್ಯಕ್ತಪಡಿಸಿದರು. ಭಾರತ ಕೇವಲ 36 ರನ್‌ಗಳಿಗೆ ತಮ್ಮ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
'ನಾವು ಆರಂಭ ಮಾಡಿದ ರೀತಿ ನೋಡಿದರೆ, ನಾವು ಇನ್ನೂ 30-40 ರನ್‌ಗಳನ್ನು ಗಳಿಸಬಹುದಿತ್ತು. ಕೊನೆಯ ಆರು ಓವರ್‌ಗಳಲ್ಲಿ ನಾವು ರನ್ ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಅದು ನಮಗೆ ನಷ್ಟವನ್ನುಂಟು ಮಾಡಿತು. ಇದು ಉತ್ತಮ ಬ್ಯಾಟಿಂಗ್ ವಿಕೆಟ್ ಎಂದು ನಮಗೆ ತಿಳಿದಿತ್ತು. ಆದರೆ, ಕೊನೆಯ ಆರು ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡದಿರುವುದು ನಮಗೆ ನಷ್ಟವನ್ನುಂಟು ಮಾಡಿತು. ಆರಂಭಿಕ ಆಟಗಾರ್ತಿಯರೆಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಕಾರಣದಿಂದಾಗಿ ನಾವು 300 ರನ್ ಗಳಿಸಿದೆವು' ಎಂದು ಭಾನುವಾರ ನಡೆದ ಪಂದ್ಯದ ನಂತರದ ಸಮಾರಂಭದಲ್ಲಿ ಹರ್ಮನ್ ಪ್ರೀತ್ ಕೌರ್ ಹೇಳಿದರು.