ಅಡಿಲೇಡ್: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ದಾಖಲಿಸಿದೆ.
ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 265 ರನ್ ಗಳ ಸವಾಲಿನ ಗುರಿಯನ್ನು ಯಶಸ್ವಿಯಾಗಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 2 ವಿಕೆಟ್ ಅಂತರದ ಜಯ ಸಾಧಿಸಿತು.
ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ತನ್ನ ಕೈವಶ ಮಾಡಿಕೊಂಡಿದೆ.
ಭಾರತ ನೀಡಿದ್ದ 265 ರನ್ ಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಮ್ಯಾಥ್ಯೂ ಶಾರ್ಟ್ 74 ರನ್ ಮತ್ತು ಕೂಪರ್ ಕೊನೋಲಿ 61 ರನ್ ಗಳಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಉಳಿದಂತೆ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಶ್ 11, ಟ್ರಾವಿಸ್ ಹೆಡ್ 28, ರೆನ್ಶಾ 30, ಅಲೆಕ್ಸ್ ಕರಿ 9, ಮಿಚೆಲ್ ಓವೆನ್ 36, ಬಾರ್ಟ್ಲೆಟ್ 3, ಮಿಚೆಲ್ ಸ್ಟಾರ್ಕ್ 4 ರನ್ ಗಳಿಸಿದರು.
ಭಾರತದ ಪರ ಅರ್ಶ್ ದೀಪ್ ಸಿಂಗ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದಿದ್ದು, ಮಹಮದ್ ಸಿರಾಜ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು.