ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಬಹು ನಿರೀಕ್ಷಿತ ಭಾರತ- ಪಾಕಿಸ್ತಾನ ನಡುವಿನ ಪಂದ್ಯ ನಾಳೆ ನಡೆಯಲಿದೆ. ಬದ್ಧ ವೈರಿಗಳ ನಡುವಿನ ಕಾದಾಟ ವೀಕ್ಷಿಸಲು ಪ್ರಪಂಚದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವಂತೆಯೇ ಎಲ್ಲಾ ಟೀಕೆಗಳನ್ನು ಬದ್ದಿಗೊತ್ತು, ಪಂದ್ಯವನ್ನು ಎಂಜಾಯ್ ಮಾಡುವಂತೆ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಆಕ್ರಮ್ ಪಾಕಿಸ್ತಾನ ಮತ್ತು ಭಾರತ ತಂಡಕ್ಕೆ ಕಿವಿಮಾತು ಹೇಳಿದ್ದಾರೆ.
ನಾಲ್ಕು ತಿಂಗಳ ಹಿಂದೆ ನಡೆದ ಮಿಲಿಟರಿ ಸಂಘರ್ಷ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದ ನಂತರ ದುಬೈನಲ್ಲಿ ನಡೆಯುತ್ತಿರುವ ಎ ಗುಂಪಿನ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತ- ಪಾಕ್ ಮುಖಾಮುಖಿಯಾಗುತ್ತಿವೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಪೈಕಿ ನಾಳೆ ಮೊದಲ ಪಂದ್ಯ ನಡೆಯುತ್ತಿದೆ. ಈ ಕುರಿತು AFP ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪಾಕಿಸ್ತಾನದ ಹಿರಿಯ ಆಟಗಾರ ವಾಸಿಂ ಅಕ್ರಮ್, "ಕ್ರಿಕೆಟ್ ಬಿಟ್ಟು ಉಳಿದೆಲ್ಲವನ್ನೂ ಮರೆತುಬಿಡಿ. ಒಂದು ತಂಡ ಗೆಲ್ಲುತ್ತದೆ, ಒಂದು ತಂಡ ಸೋಲುತ್ತದೆ" ಎಂದಿದ್ದಾರೆ.
ನೀವು ಪಂದ್ಯ ಗೆದ್ದರೆ ಕೇವಲ ಆ ಕ್ಷಣವನ್ನು ಆನಂದಿಸಿ. ಒತ್ತಡ ಬರುತ್ತದೆ, ಅದನ್ನು ಆನಂದಿಸಿ ಮತ್ತು ಶಿಸ್ತನ್ನು ತೋರಿಸಿ ಏಕೆಂದರೆ ಇದು ಕೇವಲ ಆಟವಾಗಿದೆ. ಇದು ಎರಡೂ ತಂಡಗಳು ಮತ್ತು ಉಭಯ ತಂಡಗಳ ಅಭಿಮಾನಿಗಳಿಗಾಗಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತದ ವಿರುದ್ಧದ ಪ್ರತಿ ಪಂದ್ಯವನ್ನು ಆನಂದಿಸಿದ್ದೇನೆ: 25,000 ಸೀಟ್ ಗಳ ಸಾಮರ್ಥ್ಯದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಾಳೆ ಹೌಸ್ ಫುಲ್ ಆಗುವ ನಿರೀಕ್ಷೆಯಿದೆ. ಅಕ್ರಂ ಅವರು ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅಂತಹ ಒತ್ತಡದ ಸಂದರ್ಭಗಳಲ್ಲಿ ಹೇಗೆ ನಿಭಾಯಿಸಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಭಾರತದ ವಿರುದ್ಧದ ಪ್ರತಿ ಪಂದ್ಯವನ್ನು ನಾನು ಆನಂದಿಸಿದ್ದೇನೆ. ಎದುರಾಳಿ ಆಟಗಾರರು ಇದೇ ಮಾಡಿದ್ದಾರೆ ಎಂದು 1999ರಲ್ಲಿ ಉಗ್ರರ ಬೆದರಿಕೆಯ ನಡುವೆಯೂ ಭಾರತದಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ವಾಸಿಂ ಅಕ್ರಮ್ ಹೇಳಿದ್ದಾರೆ. 1987ರಲ್ಲಿ ಉಭಯ ದೇಶಗಳು ಯುದ್ಧದ ಸಮೀಪದಲ್ಲಿದ್ದಾಗಲೂ ಅವರ ಪಾಕ್ ತಂಡದಲ್ಲಿದ್ದರು.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತವನ್ನು ಆಡುವಾಗ ಪ್ರಚೋದನೆ ಇರದಿರಲಿ ಎಂದು ಪಾಕಿಸ್ತಾನ ತಂಡಕ್ಕೆ ಸೂಚಿಸಿದ ಅಕ್ರಮ್, "ಕಳೆದ ವಾರ ತ್ರಿಕೋನ ಸರಣಿಯನ್ನು ಗೆದ್ದಂತೆ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಗೆಲ್ಲುವ ಅವಕಾಶವಿದೆ. ಭಾರತದ ವಿರುದ್ಧ ಗೆಲ್ಲುವಿನ ಬಗ್ಗೆ ಮಾತ್ರ ಯೋಚಿಸುವುದರ ಬದಲು ಏಷ್ಯಾ ಕಪ್ ಗೆಲ್ಲುವ ಬಗ್ಗೆ ಯೋಜಿಸಬೇಕು ಎಂದು ಪಾಕ್ ತಂಡಕ್ಕೆ ಸಲಹೆ ನೀಡಿದ್ದಾರೆ. ಶುಕ್ರವಾರ ನಡೆದ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವು ಒಮನ್ ವಿರುದ್ಧ 93 ರನ್‌ಗಳಿಂದ ಜಯ ಸಾಧಿಸಿತು.
ಶ್ರೀಲಂಕಾ, ಅಫ್ಘಾನಿಸ್ತಾನ, ಹಾಂಕಾಂಗ್ ಮತ್ತು ಬಾಂಗ್ಲಾದೇಶ ಬಿ ಗುಂಪಿನಲ್ಲಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿವೆ. ಸೆಪ್ಟೆಂಬರ್ 28 ರಂದು ದುಬೈನಲ್ಲಿ ಏಷ್ಯಾಕಪ್ ಫೈನಲ್ ಪಂದ್ಯ ನಡೆಯಲಿದೆ.