ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮುಖಭಂಗಕ್ಕೆ ಕಾರಣವಾಗಿತ್ತು. ಹೀಗಾಗಿ ಪಾಕಿಸ್ತಾನ ತಂಡವು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಇದಕ್ಕೆ ಹೊಣೆ ಮಾಡಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಬಗ್ಗೆ ಐಸಿಸಿಗೆ ದೂರು ನೀಡಿದ್ದು ಮ್ಯಾಚ್ ರೆಫರಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿತ್ತು. ಇದಕ್ಕೆ ACC ಸೊಪ್ಪು ಹಾಕಲಿಲ್ಲ. ಹೀಗಾಗಿ ಪಾಕ್ ಆಟಗಾರರು ಯುಎಇ ವಿರುದ್ಧದ ಇಂದಿನ ಪಂದ್ಯವನ್ನು ಬಾಯ್ಕಾಟ್ ಮಾಡುತ್ತಿರುವುದಾಗಿ ವರದಿಯಾಗಿತ್ತು. ಅಲ್ಲದೆ ಪಾಕ್ ಆಟಗಾರರು ಕ್ರೀಡಾಂಗಣಕ್ಕೆ ಬಾರದಿರುವುದು ಇದಕ್ಕೆ ಪುಷ್ಠಿ ನೀಡಿತ್ತು.
ಆದರೆ ಇದೀಗ ಮಾತುಕತೆಯಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುವ ಆಶಯದೊಂದಿಗೆ ಪಿಸಿಬಿ ಏಷ್ಯಾ ಕಪ್ ಆಯೋಜಕರಿಗೆ ಯುಎಇ-ಪಾಕಿಸ್ತಾನ ಪಂದ್ಯವನ್ನು ಒಂದು ಗಂಟೆ ಮುಂದೂಡುವಂತೆ ವಿನಂತಿಸಿದ್ದು ಪಾಕ್ ತಂಡವು ಈಗ ಹೋಟೆಲ್‌ನಿಂದ ಹೊರಟು ಮೈದಾನಕ್ಕೆ ತೆರಳುತ್ತಿದೆ. ಹೀಗಾಗಿ ಪಂದ್ಯ ನಿಗದಿತ ಸಮಯಕ್ಕೆ ಒಂದು ಗಂಟೆ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ.