ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಪಂದ್ಯ ನಡೆದಾಗಲೆಲ್ಲಾ ಪಂದ್ಯಕ್ಕೂ ಮೊದಲು ಪಾಕಿಸ್ತಾನದ ಕಡೆಯಿಂದ ಸಾಲು ಸಾಲು ಹೇಳಿಕೆಗಳು ಕೇಳಿಬರುತ್ತವೆ. ಅಭಿಮಾನಿಗಳಿಂದ ಹಿಡಿದು Pak ತಂಡದ ಮಾಜಿ ಆಟಗಾರರು ಕೂಡ ಕೆಲವು ಅಸಾಧ್ಯವೆನಿಸುವ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುತ್ತಾರೆ. ಅದಕ್ಕೆ ಕನ್ನಡಿ ಹಿಡಿದಂತೆ ಪಾಕ್ ಆಟಗಾರನೊಬ್ಬ ಆಡಿದ ಮೂರು ಪಂದ್ಯಗಳಲ್ಲೂ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದಾನೆ.
ಏಷ್ಯಾಕಪ್ ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್ ಪ್ರಸ್ತುತ ಪಾಕ್ ತಂಡದಲ್ಲಿರುವ ಆರಂಭಿಕ ಆಟಗಾರ ಸೈಮ್ ಅಯೂಬ್ (Saim Ayub) ಜಸ್ಪ್ರೀತ್ ಬುಮ್ರಾರ (Jasprit Bumrah) ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಬಹಿರಂಗ ಸವಾಲು ಹಾಕಿದ್ದನು. ಆದರೆ ಸೈಮ್ ಆಯೂಬ್ ಏಷ್ಯಾಕಪ್ ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೋಲ್ಡನ್ ಡಕೌಟ್ ಹಾಗೂ ಮೂರನೇ ಪಂದ್ಯದಲ್ಲಿ ಡಕೌಟ್ ಆಗಿದ್ದು ಪಾಕ್ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಮುಖ ಮುಚ್ಚಿಕೊಳ್ಳುವಂತೆ ಆಗಿದೆ.
ಒಮಾನ್ ವಿರುದ್ಧ ನಡೆದ ಪಂದ್ಯದಲ್ಲಿ ಖಾತೆಯನ್ನು ತೆರೆಯದೆ ಸೈಮ್ ಆಯೂಬ್ ಗೋಲ್ಡನ್ ಡಕ್ ಆಗಿದ್ದನು. ಸೈಮ್ ಅಯೂಬ್ ತಾನೂ ಎದುರಿಸಿದ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯೂ ಆಗಿ ಔಟಾಗಿದ್ದನು. ನಂತರ ಭಾರತ ವಿರುದ್ಧದ ಪಂದ್ಯದಲ್ಲೂ ಸಹ ಅಯೂಬ್ ಹಾರ್ದಿಕ್ ಪಾಂಡ್ಯರ ಮೊದಲ ಎಸೆತದಲ್ಲಿ ಬುಮ್ರಾ ಗೆ ಕ್ಯಾಚ್ ನೀಡಿ ಮತ್ತೊಮ್ಮೆ ಗೋಲ್ಡನ್ ಡಕೌಟ್ ಆಗಿದ್ದರು. ಇದು ಇಲ್ಲಿಗೆ ನಿಂತಿಲ್ಲ. ಇಂದು ಯುಎಇ ವಿರುದ್ಧ ನಡೆದ ಪಂದ್ಯದಲ್ಲೂ ಸೈಮ್ ಅಯೂಬ್ ಬೌಲರ್ ಜುನೈದ್ ಓವರ್ ನ ಎರಡನೇ ಎಸೆತದಲ್ಲಿ ಡಕೌಟ್ ಆಗಿ ಪೆವಿಲಿಯನ್ ಸೇರಿದನು. ಒಟ್ಟಿನಲ್ಲಿ ಆಡಿದ ಮೂರು ಪಂದ್ಯದಲ್ಲೂ ಶೂನ್ಯ ಸುತ್ತಿದ್ದೆ ಈತನ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲೂ ಆರಂಭಿಕ ಬ್ಯಾಟರ್ ಆಗಿ ಶೂನ್ಯ ಸುತ್ತಿದ ಮೊದಲ ಆಟಗಾರ ಎಂಬ ಕುಖ್ಯಾತಿಗೂ ಸೈಮ್ ಆಯೂಬ್ ಭಾಜನನಾಗಿದ್ದಾನೆ.
ಸತತ ಮೂರು ಪಂದ್ಯಗಳಲ್ಲೂ ಸೈಮ್ ಆಯೂಬ್ ಶೂನ್ಯ ಸುತ್ತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ತನ್ವೀರ್ ಅಹ್ಮದ್ ನನ್ನು ಗೇಲಿ ಮಾಡಲು ಆರಂಭಿಸಿದ್ದಾರೆ. ಬುಮ್ರಾ ವಿರುದ್ಧ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವುದಿರಲಿ, ಕನಿಷ್ಠ ಒಂದು ರನ್ ಬಾರಿಸುತ್ತಾನಾ ನೋಡಿ ಎಂದಿದ್ದಾರೆ. ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ, ಟೀಂ ಇಂಡಿಯಾ ಹಲವು ಬಾರಿ ಪಾಕಿಸ್ತಾನವನ್ನು ಮುಜುಗರಕ್ಕೀಡು ಮಾಡಿದೆ. ಪ್ರಸ್ತುತ ಅವರಿಲ್ಲದೆ ಆಡುತ್ತಿರುವ ಪಾಕಿಸ್ತಾನವನ್ನು ಭಾರತ ಸುಲಭವಾಗಿ ಸೋಲಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಭಾರತದ ಯುವ ಆಟಗಾರರು ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿತ್ತು.