ಅಬುದಾಬಿ: ಏಷ್ಯಾಕಪ್ 2025 ರ ಟೂರ್ನಿಯ ಇಂದಿನ ಪಂದ್ಯದಲ್ಲಿ ಭಾರತ ಮತ್ತು ಒಮನ್ ಮುಖಾಮುಖಿಯಾಗಿದ್ದು, ಈ ಪಂದ್ಯ ಟೂರ್ನಿವತಿಯಿಂದ ಔಪಚಾರಿಕ ಪಂದ್ಯವಾದರೂ ಭಾರತದ ಮಟ್ಟಿಗೆ ಐತಿಹಾಸಿಕವಾಗಿದೆ.
ಹೌದು.. 2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಒಮಾನ್ ನಡುವಿನ ಅಂತಿಮ ಗುಂಪು ಪಂದ್ಯ ಅಬುಧಾಬಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ಸೂಪರ್ ಫೋರ್‌ಗೆ ಅರ್ಹತೆ ಪಡೆದಿರುವ ಭಾರತ, ತನ್ನ ಗೆಲುವಿನ ಸರಣಿಯನ್ನು ಮುಂದುವರಿಸುವ ಗುರಿ ಹೊಂದಿದೆ.
ಒಮಾನ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಇರಾದೆ ಹೊಂದಿದೆ.
ಒಮಾನ್ ತಂಡ ಆಡಿರುವ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಕಾರಣ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದ್ದು, ಈ ಪಂದ್ಯ ಒಮಾನ್ ತಂಡಕ್ಕೆ ಕೇವಲ ಔಪಚಾರಿಕವಾಗಿದೆ.
ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, 2 ಬದಲಾವಣೆ
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿರುವುದಾಗಿ ನಾಯಕ ಸೂರ್ಯಕುಮಾರ್ ಯಾದವ್ ಘೋಷಿಸಿದ್ದಾರೆ.
ಅದರಂತೆ ವರುಣ್ ಚಕ್ರವರ್ತಿ ಬದಲಿಗೆ ಹರ್ಷಿತ್ ರಾಣಾ ಮತ್ತು ಜಸ್ಪ್ರೀತ್ ಬುಮ್ರಾ ಬದಲಿಗೆ ಅರ್ಶ್ ದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತಕ್ಕೆ ಐತಿಹಾಸಿಕ ಪಂದ್ಯ
ಇನ್ನು ಇಂದಿನ ಪಂದ್ಯ ಭಾರತಕ್ಕೆ ಐತಿಹಾಸಿಕ ಪಂದ್ಯವಾಗಿದ್ದು, ಭಾರತ ತಂಡಕ್ಕೆ ಇದು 250ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿದೆ. ಆ ಮೂಲಕ ಭಾರತ 250 ಅಥವಾ ಅದಕ್ಕಿಂತ ಹೆಚ್ಚು ಟಿ20 ಪಂದ್ಯಗಳನ್ನಾಡಿದ 2ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಇದಕ್ಕೂ ಮೊದಲು ಪಾಕಿಸ್ತಾನ ಈ ಸಾಧನೆ ಮಾಡಿತ್ತು. ಪಾಕಿಸ್ತಾನ ಈ ವರೆಗೂ 275 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದೆ.
ಉಳಿದಂತೆ ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ 228 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಶ್ರೀಲಂಕಾ 212, ಆಸ್ಟ್ರೇಲಿಯಾ 211, ಇಂಗ್ಲೆಂಡ್ 210, ದಕ್ಷಿಣ ಆಫ್ರಿಕಾ 206, ಬಾಂಗ್ಲಾದೇಶ 200 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿವೆ.