ಅಬುದಾಬಿ: 2025ರ ಏಷ್ಯಾಕಪ್ ಟೂರ್ನಿಯ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಒಮನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ 189 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಒಮನ್ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಆ ಮೂಲಕ ಭಾರತದ ಎದುರು 21 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಒಮನ್ ಪರ ಆರಂಭಿಕ ಆಟಗಾರ ಹಾಗೂ ನಾಯಕ ಜತೀಂದರ್ ಸಿಂಗ್ 32 ರನ್ ಗಳಿಸಿದರೆ, ಅಮೀರ್ ಕಲೀಮ್ ಅರ್ಧಶತಕ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹಮ್ಮದ್ ಮಿರ್ಜಾ ಕೂಡ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನಿಸಿದರಾದರೂ ಅಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು.
ಅಂತಿಮವಾಗಿ ಒಮನ್ ತಂಡ ನಿಗಧಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ 21 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಭಾರತದ ಪರ ಕುಲದೀಪ್ ಯಾದವ್, ಹರ್ಷಿತ್ ರಾಣಾ, ಅರ್ಶ್ ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು.
ಅರ್ಶ್ ದೀಪ್ ಸಿಂಗ್ 100 ವಿಕೆಟ್ ಸಾಧನೆ
ಇದೇ ಪಂದ್ಯದಲ್ಲಿ ಭಾರತದ ಅರ್ಶ್ ದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಒಮನ್ ನ ವಿನಾಯಕ್ ಶುಕ್ಲಾ ರನ್ನು ಔಟ್ ಮಾಡುವ ಮೂಲಕ ಅರ್ಶ್ ದೀಪ್ ಸಿಂಗ್ ಈ ಸಾಧನೆ ಮಾಡಿದರು.
ಆ ಮೂಲಕ ಅರ್ಶ್‌ದೀಪ್ ಟಿ20ಐ ನಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.