ದುಬೈ: ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ 'ಹ್ಯಾಂಡ್ ಶೇಕ್' ವಿವಾದ ತೀವ್ರ ಚರ್ಚೆಗೆ ಒಳಪಟ್ಟಿರುವಂತೆಯೇ ಭಾರತೀಯ ಆಟಗಾರರು ಮತ್ತೆ ಪಾಕಿಸ್ತಾನ ಆಟಗಾರರಿಗೆ ಹ್ಯಾಂಡ್ ಶೇಕ್ ಮಾಡಿಲ್ಲ.
ಹೌದು, ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು 6 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ಭಾರತದ ಆಟಗಾರರು, ಪಾಕ್ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳನ್ನು ಮಾಡಲಿಲ್ಲ.
ಆದಾಗ್ಯೂ, ಭಾರತ ತಂಡದ ಕೋಚ್ ಗೌತಮ್ ಗಂಭೀರ್, ಹ್ಯಾಂಡ್ ಶೇಕ್ ಶಿಷ್ಟಾಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಂತೆ ಆಟಗಾರರ ಮನವೊಲಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಡ್ರೆಸ್ಸಿಂಗ್ ರೂಮ್ ನಿಂದ ಹೊರಬಂದು ಅಂಪೈರ್ ಗಳಿಗೆ ಹ್ಯಾಂಡ್ ಶೇಕ್ ಮಾಡುವಂತೆ ಆಟಗಾರರಿಗೆ ಗಂಭೀರ್ ಹೇಳುವುದು ವಿಡಿಯೋದಲ್ಲಿದೆ. ಆದರೆ ಕೇವಲ ಅಧಿಕಾರಿಗಳಿಗೆ ಮಾತ್ರ ಹ್ಯಾಂಡ್ ಶೇಕ್ ಮಾಡಲಾಗಿದ್ದು, ಪಾಕಿಸ್ತಾನ ಆಟಗಾರರಿಗೆ ಮಾಡಿಲ್ಲ.
ಕಳೆದ ವಾರ ನಡೆದ ಏಷ್ಯಾ ಕಪ್ ಟೂರ್ನಿಯ ಗ್ರೂಪ್ ಹಂತದ ಪಾಕಿಸ್ತಾನದ ವಿರುದ್ಧದ ಪಂದ್ಯದ ನಂತರ ಭಾರತೀಯ ಕ್ರಿಕೆಟ್ ತಂಡದ ಆಟಗಾರರು, ಪಾಕ್ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳನ್ನು ಮಾಡಿರಲಿಲ್ಲ. ಇದು ದೊಡ್ಡ ವಾಗ್ವಾದಕ್ಕೆ ಕಾರಣವಾಗಿದ್ದು, ಈ ವಿವಾದದಿಂದ ಮುಜಗರಕ್ಕೀಡಾದ ಪಾಕಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಿಂದಲೇ ಹೊರನಡೆಯುವ ಬೆದರಿಕೆ ಹಾಕುವಷ್ಟು ಪರಿಸ್ಥಿತಿ ನಿರ್ಮಾಣವಾಗಿತ್ತು.