ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದು, ಈ ಸಂಬಂಧ ಬಿಸಿಸಿಐಗೂ ಪತ್ರ ಬರೆದಿದ್ದಾರೆ.
ಹೌದು.. ಶ್ರೇಯಸ್ ಅಯ್ಯರ್ ಅವರು ಇಂಡಿಯಾ ಎ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ತಂಡದಿಂದಲೂ ಸಂಪೂರ್ಣವಾಗಿ ಹೊರನಡೆದಿದ್ದಾರೆ. ತಮ್ಮ ಈ ದಿಢೀರ್ ನಿರ್ಧಾರಕ್ಕೆ "ವೈಯಕ್ತಿಕ ಕಾರಣ"ಗಳನ್ನು ನೀಡಿರುವ ಅವರು, ಇಂಡಿಯಾ ಎ ತಂಡದ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯಕ್ಕೋ ಮೊದಲೇ ಈ ಅಚ್ಚರಿಯ ಬೆಳವಣಿಗೆ ನಡೆದಿರುವುದು, ಭಾರತೀಯ ಕ್ರೀಡಾಭಿಮಾನಿಗಳಿಗೆ ಶಾಕ್ ನೀಡಿದೆ. ಶ್ರೇಯಸ್ ಅಯ್ಯರ್ ದಿಢೀರ್ ರಾಜೀನಾಮೆಗೆ ಕಾರಣ ಏನು ಎಂಬ ಚರ್ಚೆ ಶುರುವಾಗಿದೆ.
ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, '"ಶ್ರೇಯಸ್ ಅಯ್ಯರ್ ಅವರು ಆಸ್ಟ್ರೇಲಿಯಾ ಎ ವಿರುದ್ಧದ ನಾಲ್ಕು ದಿನಗಳ ಪಂದ್ಯದಿಂದ ವಿರಾಮ ತೆಗೆದುಕೊಂಡಿದ್ದು, ಮುಂಬೈಗೆ ವಾಪಸ್ ಪ್ರಯಾಣ ಬೆಳೆಸಿದ್ದಾರೆ.
ವೈಯಕ್ತಿಕ ಕಾರಣಗಳಿಗೆ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಆಯ್ಕೆದಾರರಿಗೆ ತಿಳಿಸಿದ್ದಾರೆ. ಆದಾಗ್ಯೂ, ವೆಸ್ಟ್ ಇಂಡೀಸ್ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ಶ್ರೇಯಸ್ ಅಯ್ಯರ್ ಹೆಸರನ್ನು ಆಯ್ಕೆ ಮಂಡಳಿ ಪರಿಗಣಿಸುವ ಸಾಧ್ಯತೆ ಇದೆ" ಎಂದು ಹೇಳಿದೆ.
ವಿಶ್ರಾಂತಿ ಬೇಕು.. BCCIಗೆ ಅಯ್ಯರ್ ಪತ್ರ
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಎ ತಂಡದ ನಾಯಕರಾಗಿ ನೇಮಕಗೊಂಡಿದ್ದ ಅಯ್ಯರ್, ಮಂಗಳವಾರ ಲಕ್ನೋದಲ್ಲಿ ಆರಂಭವಾದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದರು. ಆಯ್ಕೆದಾರರು ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರೊಂದಿಗೆ ಸಮಾಲೋಚಿಸಿದ ನಂತರ, ಅಯ್ಯರ್ ತಮ್ಮ ಮನವಿಯನ್ನು ಮೇಲ್ ಮೂಲಕ ಬಿಸಿಸಿಐಗೆ ಔಪಚಾರಿಕ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ರೆಡ್ ಬಾಲ್ ಕ್ರಿಕೆಟ್ ನಿಂದ ತಾತ್ಕಾಲಿಕ ವಿರಾಮ
ಇನ್ನು ಈ ಕುರಿತು ತಂಡದ ಮೂಲಗಳು ಮಾಹಿತಿ ನೀಡಿದ್ದು, ಶ್ರೇಯಸ್ ಅಯ್ಯರ್ ರೆಡ್ ಬಾ್ಲ್ ಕ್ರಿಕೆಟ್ ನಿಂದ ತಾತ್ಕಾಲಿಕ ವಿಶ್ರಾಂತಿ ಕೋರಿದ್ದಾರೆ. ಅಯ್ಯರ್ ಬೆನ್ನಿನ ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲುತ್ತಿದ್ದು ಮೈದಾನದಲ್ಲಿ ಹೊಚ್ಚಿನ ಹೊತ್ತು ಸಮಯ ಕಳೆಯಲು ಆಗುತ್ತಿಲ್ಲ. ಇದೇ ವಿಚಾರವಾಗಿ ವಿರಾಮ ತೆಗೆದುಕೊಳ್ಳುವ ವಿಚಾರವಾಗಿ ತಂಡದ ಆಡಳಿತ ಮಂಡಳಿಗೆ ಅಯ್ಯರ್ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಂಡೀಸ್ ಸರಣಿಗೂ ಅನುಮಾನ
ಅಯ್ಯರ್ ಅವರ ಹಾಲಿ ಪರಿಸ್ಥಿತಿ ಗಮನಿಸಿದರೆ ಅವರು ಭಾರತ ತಂಡದ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಫಿಸಿಯೋಗಳು ಮತ್ತು ತರಬೇತುದಾರರೊಂದಿಗೆ ಸಮಾಲೋಚಿಸಿ ಭವಿಷ್ಯದಲ್ಲಿ ತಮ್ಮ ದೇಹವನ್ನು ಪರೀಕ್ಷಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಮಂಡಳಿಗೆ ತಿಳಿಸಿದ್ದಾರೆ," ಎಂದು ಮೂಲವೊಂದು ದೃಢಪಡಿಸಿದೆ.