ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಭಾರತ ತಂಡ ದಾಖಲೆಯೊಂದನ್ನು ನಿರ್ಮಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 4 ಹಂತದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಭರ್ಜರಿ ಆರಂಭ ಪಡೆದಿದೆ.
ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ದಾಖಲೆ ಬರೆದಿದ್ದಾರೆ.
ಗಿಲ್ 19 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿ ಸಹಿತ 29 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ 32 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ 60 ರನ್ ಚಚ್ಚಿ ಅಜೇಯರಾಗಿ ಉಳಿದಿದ್ದಾರೆ.
ಪವರ್ ಪ್ಲೇನಲ್ಲಿ ದಾಖಲೆ
ಇನ್ನು ಇಂದು ಬಾಂಗ್ಲಾದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಹಾಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆ ಬರೆದಿದ್ದು, ಪವರ್ ಪ್ಲೇನಲ್ಲಿ ಗರಿಷ್ಠ ರನ್ ದಾಖಲಿಸಿದ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಭಾರತ ಪವರ್ ಪ್ಲೇಯ 6 ಓವರ್ ನಲ್ಲಿ 72 ರನ್ ಕಲೆಹಾಕಿತ್ತು.
ಇದು ಹಾಲಿ ಏಷ್ಯಾಕಪ್ ಟೂರ್ನಿಯಲ್ಲಿ ಪವರ್ ಪ್ಲೇ ನಲ್ಲಿ ತಂಡವೊಂದು ಕಲೆಹಾಕಿದ ಗರಿಷ್ಠ ರನ್ ಗಳಿಕೆಯಾಗಿದೆ. ಈ ಹಿಂದೆ ಇದೇ ಭಾರತ ತಂಡ ಪಾಕಿಸ್ತಾನ ವಿರುದ್ಧ ಪವರ್ ಪ್ಲೇನಲ್ಲಿ 69 ರನ್ ಕಲೆಹಾಕಿತ್ತು. ಇದು ಹಾಲಿ ಟೂರ್ನಿಯಲ್ಲಿ ಈ ವರೆಗಿನ ತಂಡವೊಂದರ ಪವರ್ ಪ್ಲೇಯ ಗರಿಷ್ಠ ರನ್ ಗಳಿಕೆಯಾಗಿತ್ತು. ಇದೀಗ ಭಾರತ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ.
ಅಭಿಷೇಕ್-ಗಿಲ್ ಅದ್ಭುತ ಜೊತೆಯಾಟ
ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದ ಅಭಿಷೇಕ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 77 ರನ್ ಜೊತೆಯಾಟ ನೀಡಿತು. ಈ ಪೈಕಿ ಗಿಲ್ 29 ರನ್ ಕಲೆಹಾಕಿದರೆ, ಅಭಿಷೇಕ್ ಶರ್ಮಾ 46ರನ್ ಚಚ್ಚಿದರು. ಬಳಿಕ ಗಿಲ್ ರಿಷಾದ್ ಹೊಸೈನ್ ಬೌಲಿಂಗ್ ನಲ್ಲಿ ಔಟಾದರೆ, ಅಭಿಷೇಕ್ ಶರ್ಮಾ ರನೌಟ್ ಬಲಿಯಾಗಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಭಾರತ 11.2 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ. 4 ರನ್ ಗಳಿಸಿರುವ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಇನ್ನೂ ಖಾತೆ ತೆರೆಯದ ಹಾರ್ದಿಕ್ ಪಾಂಡ್ಯಾ ಕ್ರೀಸ್ ನಲ್ಲಿದ್ದಾರೆ.