ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ನೇ ಆವೃತ್ತಿಯಲ್ಲಿ ಈಗಾಗಲೇ ಹಲವು ದಾಖಲೆಗಳು ಆಗಿವೆ. ಬ್ಯಾಟ್ಸ್‌ಮನ್‌ಗಳು ಎಷ್ಟೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಅಂತಿಮವಾಗಿ ಪಂದ್ಯ ಗೆಲ್ಲಲು ಕಾರಣವಾಗುವುದು ಬೌಲರ್‌ಗಳೇ. ಹೀಗಿರುವಾಗ, ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಭಾರತೀಯ ವೇಗಿ ಪಾತ್ರರಾಗಿದ್ದಾರೆ. ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮತ್ತೊಂದೆಡೆ ಸ್ಪಿನ್ನರ್ ಯುಜ್ವೇಂದ್ರ ಚಾಹಲ್, ಪಂದ್ಯಾವಳಿಯಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದಲ್ಲಿ, ಆಯುಷ್ ಮ್ಹಾತ್ರೆ ಅವರ ವಿಕೆಟ್ ಕಬಳಿಸುವ ಮೂಲಕ ಭುವನೇಶ್ವರ್ ಕುಮಾರ್ ತಮ್ಮ 200ನೇ ವಿಕೆಟ್ ಪಡೆದು ದಾಖಲೆ ಬರೆದರು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭುವನೇಶ್ವರ್ ಅವರ 19ನೇ ವಿಕೆಟ್ ಆಗಿತ್ತು. ಅವರು ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗೆ ತಮ್ಮ ಯಶಸ್ಸನ್ನು ಕಂಡುಕೊಂಡರು. ಅಲ್ಲಿ ಅವರು 145 ಪಂದ್ಯಗಳಲ್ಲಿ 26.81 ಸರಾಸರಿಯಲ್ಲಿ 157 ವಿಕೆಟ್‌ಗಳನ್ನು ಮತ್ತು 7.72 ರ ಅತ್ಯುತ್ತಮ ಎಕಾನಮಿ ರೇಟ್ ಹೊಂದಿದ್ದರು.
ಭುವನೇಶ್ವರ್ ಕುಮಾರ್: ಕಿಂಗ್ ಆಫ್ ಸ್ವಿಂಗ್
ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಕಣ್ಮರೆಯಾಗಿರುವ ಭುವನೇಶ್ವರ್ ಕುಮಾರ್ ಅವರು ತಮ್ಮ ಸ್ವಿಂಗ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಲೇ ಇರುತ್ತಾರೆ. ಭುವನೇಶ್ವರ್ 2011ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಪುಣೆ ವಾರಿಯರ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಆದರೆ ಅದಕ್ಕೂ ಮೊದಲು, ಅವರು 2009 ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.
ಪುಣೆ ವಾರಿಯರ್ಸ್ ಪರ ಮೂರು ಆವೃತ್ತಿಗಳಲ್ಲಿ ಆಡಿದ ಅವರು 24 ವಿಕೆಟ್‌ಗಳನ್ನು ಪಡೆದ ನಂತರ, ಭುವನೇಶ್ವರ್ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗೆ ತೆರಳಿದರು. ಅಲ್ಲಿ ಅವರು ತಮ್ಮ ಚೊಚ್ಚಲ ಆವೃತ್ತಿಯಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದರು. ಐಪಿಎಲ್ 2017ರಲ್ಲಿ ಅವರು 26 ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಸತತ ಎರಡು ಆವೃತ್ತಿಗಳಲ್ಲಿ 2016 ಮತ್ತು 2017ರಲ್ಲಿ ಪರ್ಪಲ್ ಕ್ಯಾಪ್ ಅನ್ನು ಗೆದ್ದರು.
ನಂತರ, ಗಾಯಗಳು ಯುಪಿ ವೇಗಿಯನ್ನು ನಿರಂತರವಾಗಿ ತೊಂದರೆಗೆ ಸಿಲುಕಿಸಿದವು. ಐಪಿಎಲ್ 2025ಕ್ಕೆ ಮುಂಚಿತವಾಗಿ ಎಸ್‌ಆರ್‌ಹೆಚ್ ಅವರನ್ನು ಬಿಡುಗಡೆ ಮಾಡಿದಾಗ, ಆರ್‌ಸಿಬಿ ಅವರನ್ನು ಹರಾಜಿನಲ್ಲಿ ಆಯ್ಕೆ ಮಾಡಿತು. ಭುವನೇಶ್ವರ್ ದೇಶೀಯ ಕ್ರಿಕೆಟ್ ಮೂಲಕ ಮತ್ತೊಮ್ಮೆ ತಮ್ಮನ್ನು ತಾವು ಸಾಭೀತುಪಡಿಸಿಕೊಂಡರು. ಆರ್‌ಸಿಬಿಯ ಐಪಿಎಲ್ ವಿಜೇತ ಅಭಿಯಾನದಲ್ಲಿ, ಭುವನೇಶ್ವರ್ 17 ವಿಕೆಟ್‌ಗಳನ್ನು ಕಬಳಿಸಿದರು.