ಡಾರ್ವಿನ್: ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಹೀನಾಯವಾಗಿ ಸೋತಿದ್ದ ಆಸ್ಟ್ರೇಲಿಯಾ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ತನ್ನ ಸೇಡು ತೀರಿಸಿಕೊಳ್ಳುವತ್ತ ದಾಪುಗಾಲಿರಿಸಿದ್ದು, ಇದಕ್ಕೆ ಮಿಚೆಲ್ ಸ್ಟಾರ್ಕ್ ‘ಮೇಲ್ ಈಗೋ’ ಸಾಥ್ ನೀಡಿದೆ ಎನ್ನಲಾಗಿದೆ.
ಹೌದು.. ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಬಾಂಗ್ಲಾದೇಶದ ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ ನಡುವೆ ನಡೆದ ಮಾತಿನ ಚಕಮಕಿ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸ್ಟಾರ್ಕ್ ಅವರ ಆಕ್ರೋಶವನ್ನು ಕೆಲವರು ಸ್ಪರ್ಧಾತ್ಮಕ ಮನೋಭಾವ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಇದನ್ನು ‘ಮೇಲ್ ಈಗೋ’ ಪ್ರದರ್ಶನ ಎಂದು ಟೀಕಿಸಿದ್ದಾರೆ.
ಅಂದಹಾಗೆ ಮಕೇಯ ರೇ ಮಿಚೆಲ್ ಓವಲ್ ಹರ್ರಪ್ ಪಾರ್ಕ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಸಿಸ್ ವೇಗಿಗಳು ಬೆಂಕಿ ಉಗುಳುತ್ತಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾ ಹುಲಿಗಳನ್ನು ಕೇವಲ 64 ರನ್ ಗಳಿಗೇ ಆಲೌಟ್ ಮಾಡಿದ್ದಾರೆ. ಬಾಂಗ್ಲಾದೇಶದ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎಂದರೆ ಇದೇ ತಂಡವೇ ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿದ್ದು? ಎಂಬ ಪ್ರಶ್ನೆ ಮೂಡುವಂತಾಗಿದೆ.
ಮಿಚೆಲ್ ಸ್ಟಾರ್ಕ್ ‘ಮೇಲ್ ಈಗೋ’ ಪ್ರದರ್ಶನ?
ಇನ್ನು ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅಕ್ಷರಶಃ ಬಾಂಗ್ಲಾ ಬ್ಯಾಟರ್ ಗಳ ಮೇಲೆ ಸವಾರಿ ಮಾಡಿದ್ದು, ಅವರ ಬೌಲಿಂಗ್ ಆರ್ಭಟ ಹೇಗಿತ್ತು ಎಂದರೆ ಕೇವಲ 10 ಓವರ್ ನಲ್ಲಿ ಸ್ಟಾರ್ಕ್ 6 ಮೇಡಿನ್ ಸಹಿತ ಕೇವಲ 12 ರನ್ ನೀಡಿ ಬರೊಬ್ಬರಿ 6 ವಿಕೆಟ್ ಪಡೆದರು. ಇದು ಅವರ ಬೌಲಿಂಗ್ ಆರ್ಭಟಕ್ಕೆ ಸಾಕ್ಷಿಯಾಗಿದೆ.
ಮಿರಾಜ್ ಜೊತೆ ಮೈದಾನದಲ್ಲೇ ಕಿರಿಕ್
ಅಂತೆಯೇ ಪಂದ್ಯದ ವೇಳೆ ಸ್ಟಾರ್ಕ್ ಬೌಲಿಂಗ್ ಮಾಡುತ್ತಿದ್ದಾಗ ಮಿರಾಜ್ ಚೆಂಡನ್ನು ಆಫ್‌ಸೈಡ್‌ನತ್ತ ತಳ್ಳಿ ರನ್ ಕದಿಯಲು ಮುಂದಾದರು. ರನ್ ಪೂರ್ಣಗೊಳಿಸುವ ಸಂದರ್ಭದಲ್ಲಿ ಮಿರಾಜ್ ಪಿಚ್‌ನ ಮಧ್ಯಭಾಗದತ್ತ ಸಾಗಿದರೆ, ಸ್ಟಾರ್ಕ್ ಅವರ ಫಾಲೋ ಥ್ರೂ ಕೂಡ ಅದೇ ಪ್ರದೇಶದತ್ತ ಸಾಗಿತ್ತು.
ಈ ವೇಳೆ ಮಿರಾಜ್ ಪಿಚ್‌ನ ಮಧ್ಯಭಾಗದಲ್ಲಿ ಓಡಿದ ಬಗ್ಗೆ ಅಂಪೈರ್ ಕುಮಾರ್ ಧರ್ಮಸೇನಾ ಎಚ್ಚರಿಕೆ ನೀಡಿದರು. ಸ್ಟಾರ್ಕ್ ಅವರ ದಾರಿಯಲ್ಲಿ ತಾನು ಸಾಗಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಮಿರಾಜ್ ವಿವರಿಸಿದರೆನ್ನಲಾಗಿದೆ.
ಆದರೆ ಈ ಉತ್ತರದಿಂದ ಸ್ಟಾರ್ಕ್ ಅಸಮಾಧಾನಗೊಂಡರು. “ಇದು ನನ್ನ ಫಾಲೋ ಥ್ರೂ, ನಿನ್ನದಲ್ಲ. ವಿಕೆಟ್‌ನಿಂದ ದೂರ ತೊಲಗು” ಎಂದು ಸ್ಟಾರ್ಕ್ ಮಿರಾಜ್‌ಗೆ ಹೇಳಿರುವುದು ಸ್ಟಂಪ್ ಮೈಕ್ರೊಫೋನ್‌ನಲ್ಲಿ ದಾಖಲಾಗಿದೆ.
ಮೈದಾನದಲ್ಲೇ ‘ಈಗೋ ಕ್ಲ್ಯಾಶ್’?
ಸ್ಟಾರ್ಕ್ ಮತ್ತು ಮಿರಾಜ್ ನಡುವಿನ ಈ ಸಣ್ಣ ವಾಗ್ವಾದ ಕೆಲವೇ ಕ್ಷಣಗಳದ್ದಾಗಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಕೆಲವು ಕ್ರಿಕೆಟ್ ಅಭಿಮಾನಿಗಳು ಸ್ಟಾರ್ಕ್ ಅವರ ವರ್ತನೆಯನ್ನು ಟೆಸ್ಟ್ ಕ್ರಿಕೆಟ್‌ನ ಸಹಜ ಆಕ್ರಮಣಶೀಲತೆ ಎಂದು ಸಮರ್ಥಿಸಿದ್ದಾರೆ. ಮತ್ತೊಂದೆಡೆ, ಕೆಲವು ಅಭಿಮಾನಿಗಳು ಇಂತಹ ಸಣ್ಣ ವಿಚಾರಕ್ಕೆ ಆಟಗಾರನೊಬ್ಬ ಇಷ್ಟು ಆಕ್ರೋಶ ವ್ಯಕ್ತಪಡಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಗೆ ‘ಮೇಲ್ ಈಗೋ’ ಎಂಬ ಬಣ್ಣ ನೀಡಿರುವವರೂ ಇದ್ದಾರೆ. ಆದರೆ ಸ್ಟಾರ್ಕ್ ಅವರ ವೈಯಕ್ತಿಕ ಮನಸ್ಥಿತಿ ಅಥವಾ ಉದ್ದೇಶದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲದಿರುವುದರಿಂದ, ಇದನ್ನು ವೈಯಕ್ತಿಕ ದ್ವೇಷಕ್ಕಿಂತ ಮೈದಾನದ ತೀವ್ರ ಸ್ಪರ್ಧಾತ್ಮಕ ವಾತಾವರಣದಲ್ಲಿ ನಡೆದ ಮಾತಿನ ಚಕಮಕಿ ಎಂದು ನೋಡುವುದು ಸೂಕ್ತ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶದ ಪ್ರತಿರೋಧಕ್ಕೆ ಸ್ಟಾರ್ಕ್ ಕಿರಿಕಿರಿ?
ಪಂದ್ಯದಲ್ಲಿ ಬಾಂಗ್ಲಾದೇಶದ ಬ್ಯಾಟರ್‌ಗಳು ಆಸ್ಟ್ರೇಲಿಯಾದ ಬೌಲರ್‌ಗಳನ್ನು ಸಾಕಷ್ಟು ಹೊತ್ತು ಕಾಡಿದ್ದರು. ಇದರಿಂದ ಆಸ್ಟ್ರೇಲಿಯಾದ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿತ್ತು. ಇದೇ ಸಂದರ್ಭದಲ್ಲಿ ಮಿರಾಜ್ ಜೊತೆ ನಡೆದ ಈ ಘಟನೆ ಪಂದ್ಯದ ಉದ್ವಿಗ್ನತೆಯನ್ನು ಮತ್ತಷ್ಟು ಎತ್ತಿ ತೋರಿಸಿತು. ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ‘ಕ್ರಿಕೆಟ್‌ನಲ್ಲಿ ಆಕ್ರಮಣಶೀಲತೆ ಎಷ್ಟು? ಅದು ಯಾವ ಹಂತದಲ್ಲಿ ಅಹಂಕಾರವಾಗುತ್ತದೆ?’ ಎಂಬ ಚರ್ಚೆಯೂ ಆರಂಭವಾಗಿದೆ.