2026ರ ಟಿ20 ವಿಶ್ವಕಪ್‌ನಲ್ಲಿ 61 ರನ್‌ಗಳ ದಾಖಲೆಯ ಅಂತರದಿಂದ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ನಿಧಾನಗತಿಯ ಟ್ರ್ಯಾಕ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಇಶಾನ್ ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸಿ ತಂಡಕ್ಕೆ ಸೂಕ್ತ ಅಡಿಪಾಯ ಹಾಕಿದರು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು. ಉಸ್ಮಾನ್ ಖಾನ್ ಅವರ 44 ರನ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಭಾರತದ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿಲ್ಲ.
ಎರಡನೇ ಇನಿಂಗ್ಸ್‌ನಲ್ಲಿ ಭಾರತ ಆಟದಲ್ಲಿ ಎಷ್ಟು ಮುಂದಿತ್ತು ಎಂದರೆ, ನಾಯಕ ಸೂರ್ಯಕುಮಾರ್ ಯಾದವ್ ಒಂದು ಹಂತದಲ್ಲಿ ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಅವರಿಗೂ ಬೌಲಿಂಗ್ ಮಾಡಲು ಅವಕಾಶ ನೀಡಿದರು. ತಿಲಕ್ ಎರಡು ಓವರ್ ಬೌಲ್ ಮಾಡಿದರೆ, ರಿಂಕುಗೆ ಒಂದು ಓವರ್ ನೀಡಲಾಯಿತು.
ಈ ನಡೆಯನ್ನು ಗಮನಿಸಿ ಭಾರತದ ಮಾಜಿ ಆಟಗಾರ ಅತುಲ್ ವಾಸನ್, ನಾಯಕ ಸೂರ್ಯಕುಮಾರ್ ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ್ದಾರೆ ಎಂದು ಹೇಳಿದ್ದಾರೆ.
'ಸೂರ್ಯಕುಮಾರ್ ಯಾದವ್ ನೆ ಎಂಡ್ ಮೇ ಉನ್ಕೊ (ಪಾಕಿಸ್ತಾನ) ಜಲೀಲ್ ಕಿಯಾ ಹೈ ಅಪ್ನೆ ಪಾರ್ಟ್ ಟೈಮ್ ಬೌಲರ್ಸ್ ಕೋ ಲಗಾಕೆ, ಕಿ ಚಾಲಿಯೇ ತೋಡಾ ಸ ಮ್ಯಾಚ್ ಬಾದ್ ಜಾಯೆ (ಇದರರ್ಥ ಸೂರ್ಯಕುಮಾರ್ ಯಾದವ್ ಪಾಕಿಸ್ತಾನಕ್ಕೆ ಭಾರಿ ಮುಜುಗರ ಉಂಟುಮಾಡಿದರು. ಕೇವಲ ಆಟವನ್ನು ವಿಸ್ತರಿಸಲು ಅವರು ತಮ್ಮ ಅರೆಕಾಲಿಕ ಬೌಲರ್‌ಗಳಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು). ಯಾವುದೇ ಹಂತದಲ್ಲಿಯೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಹೋಲಿಕೆ ಇರಲಿಲ್ಲ' ಎಂದು ವಾಸನ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಆಕರ್ಷಕ ಬೌಲಿಂಗ್ ಮತ್ತು ಇಶಾನ್ ಕಿಶಾನ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವು ಗಮನಸೆಳೆಯಿತು. ಭಾನುವಾರದಂದು ಏಕಪಕ್ಷೀಯ 61 ರನ್‌ಗಳ ಗೆಲುವು ಸಾಧಿಸುವ ಮೂಲಕ ಭಾರತವು T20 ವಿಶ್ವಕಪ್ ಸೂಪರ್ 8ಕ್ಕೆ ಎಂಟ್ರಿ ನೀಡಿತು. ಇದು T20Iಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ (ರನ್-ಮಾರ್ಜಿನ್‌ನಿಂದ) ಸಿಕ್ಕ ಅತಿದೊಡ್ಡ ಜಯವಾಗಿದೆ.
ಈ ಗೆಲುವಿನೊಂದಿಗೆ ಭಾರತ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮುನ್ನಡೆಯನ್ನು 8-1ಕ್ಕೆ ವಿಸ್ತರಿಸಿದೆ. ಭಾರತ ಪಾಕಿಸ್ತಾನ 9 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೇವಲ ಒಂದು ಬಾರಿ ಮಾತ್ರ ಪಾಕಿಸ್ತಾನ ಜಯ ಸಾಧಿಸಿದೆ.
ಭಾರತವು ಆರಂಭದಲ್ಲಿಯೇ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಬಳಿಕ ಇಶಾನ್ ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಭಾರತವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಅವರ ಇನಿಂಗ್ಸ್ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಭಾರತವು ಬೌಲಿಂಗ್‌ನಲ್ಲಿಯೂ ಉತ್ತಮ ಪ್ರಭಾವ ಬೀರಿತು. ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಮೇಡನ್‌ನೊಂದಿಗೆ ಪ್ರಾರಂಭಿಸಿದರು ಮತ್ತು ಜಸ್ಪ್ರೀತ್ ಬುಮ್ರಾ ಡಬಲ್-ವಿಕೆಟ್ ಓವರ್‌ನೊಂದಿಗೆ ಅದನ್ನು ಅನುಸರಿಸಿದರು. ಹಾರ್ದಿಕ್, ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಮತ್ತು ತಿಲಕ್ ತಲಾ ಒಂದು ವಿಕೆಟ್ ಕಬಳಿಸಿದರು.