ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಮರಳಲು ಸಜ್ಜಾಗುತ್ತಿರುವಾಗ ಅವರ ಸಹೋದರ ವಿಕಾಸ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ರಹಸ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಸರಣಿ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು, ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ 'ಸುಲಭ ಸ್ವರೂಪ'ದ ಏಕದಿನ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ವಿರಾಟ್ ಕೊಹ್ಲಿ ಅವರ ನಿರ್ಧಾರವನ್ನು ಪ್ರಶ್ನಿಸಿದ್ದರು. ವಿರಾಟ್ ಸಮಕಾಲೀನರೇ ಆದ ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಅವರಂತಹವರು ಆಶಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕಾಲದಲ್ಲಿ ವಿರಾಟ್ ನಿವೃತ್ತಿ ಘೋಷಿಸಿದ್ದು ಸರಿಯಲ್ಲ ಎಂದು ಮಂಜ್ರೇಕರ್ ಹೇಳಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಆಗ್ಗಾಗ್ಗೆ ತಮ್ಮ ಸಹೋದರ ವಿರಾಟ್ ಅವರನ್ನು ಸಮರ್ಥಿಸಿಕೊಳ್ಳುವ ವಿಕಾಸ್, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ, ಅವರ ಪೋಸ್ಟ್ ಮಂಜ್ರೇಕರ್ ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಬಂದಿರುವಂತೆ ತೋರುತ್ತದೆ ಎನ್ನಲಾಗಿದೆ.
'ಸೀಮ್ಸ್ ಲೈಕ್ ಲೋಗೋನ್ ಕಿ ದಾಲ್ ರೋಟಿ ನಹಿ ಚಲ್ತಿ. ಬಿನಾ ವಿರಾಟ್ ಕೊಹ್ಲಿ ಕಾ ನಾಮ್ ಲಿಯೇ ಹುಯೆ (ವಿರಾಟ್ ಕೊಹ್ಲಿ ಹೆಸರನ್ನು ತೆಗೆದುಕೊಳ್ಳದೆ ಜನರು ತಮ್ಮ ಮನೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ತೋರುತ್ತದೆ)' ಎಂದು ವಿಕಾಸ್ ಬರೆದಿದ್ದಾರೆ. ಕೆಲವು ಜನರು ಅನಗತ್ಯವಾಗಿ ವಿರಾಟ್ ಕೊಹ್ಲಿಯ ಹೆಸರನ್ನು ಎಳೆದು ತರುತ್ತಿದ್ದಾರೆ. ಇದು ಬಹುಶಃ ಅವರು ಗಮನ ಸೆಳೆಯಲು ಆಗಿರಬಹುದು. ಮಂಜ್ರೇಕರ್ ಅವರ ಹೇಳಿಕೆಗೆ ಈ ಪ್ರತಿಕ್ರಿಯೆ ಬಂದಿದೆ ಎಂದು ಅಭಿಮಾನಿಗಳು ವ್ಯಾಖ್ಯಾನಿಸಿದ್ದಾರೆ.
ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಕೊಹ್ಲಿ ತಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಬದಲು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇ ಸಮಯದಲ್ಲಿ 'ಸುಲಭವಾದ ಸ್ವರೂಪ'ವಾದ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದ್ದಾರೆ.
'ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಎತ್ತರವನ್ನು ತಲುಪುತ್ತಿದ್ದಂತೆ, ನನ್ನ ಮನಸ್ಸು ವಿರಾಟ್ ಕೊಹ್ಲಿಯತ್ತ ಸಾಗುತ್ತಿದೆ. ಅವರು ಟೆಸ್ಟ್‌ನಿಂದ ದೂರ ಸರಿದಿದ್ದಾರೆ ಮತ್ತು ನಿವೃತ್ತಿಗೂ ಮುನ್ನ ಅವರು ಟೆಸ್ಟ್‌ನಲ್ಲಿ ಐದು ವರ್ಷ 31ರ ಸರಾಸರಿಯನ್ನು ಏಕೆ ಹೊಂದಿದ್ದಾರೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಸಂಪೂರ್ಣವಾಗಿ ಹಾಕಲಿಲ್ಲ ಎಂಬುದು ದುರದೃಷ್ಟಕರ. ಏನು ಮಾಡಬಹುದಿತ್ತು ಎಂಬುದರ ಬಗ್ಗೆ ಅವರು ಯೋಚಿಸಬೇಕಿತ್ತು. ಆದರೆ, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್‌ರಂತಹ ಜನರು ನಿಜವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಕೊಹ್ಲಿ ಇಲ್ಲದಿರುವುದು ನನಗೆ ಬೇಸರವಾಗಿದೆ' ಎಂದು ಮಂಜ್ರೇಕರ್ ತಿಳಿಸಿದ್ದಾರೆ.
'ಪರವಾಗಿಲ್ಲ, ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಎಲ್ಲ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ, ಅವರು ಏಕದಿನ ಕ್ರಿಕೆಟ್ ಆಡಲು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ನನಗೆ ಹೆಚ್ಚು ನಿರಾಶೆಯನ್ನುಂಟುಮಾಡಿದೆ. ಏಕೆಂದರೆ, ಇದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ, ನಾನು ಮೊದಲೇ ಹೇಳಿದಂತೆ ಇದು ಅತ್ಯಂತ ಸುಲಭವಾದ ಸ್ವರೂಪ' ಎಂದಿದ್ದರು.