ಆಸ್ಟ್ರೇಲಿಯ ವಿರುದ್ಧದ ಮುಂಬರುವ T20I ಸರಣಿಯ ಪ್ರಚಾರದ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನ, ಭಾರತವನ್ನು ಗುರಿಯಾಗಿಸಿಕೊಂಡಿದೆ. ವಿಡಿಯೋದಲ್ಲಿ 'ಹ್ಯಾಂಡ್‌ಶೇಕ್' ವಿವಾದವನ್ನು ಉಲ್ಲೇಖಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಕ್ರಿಕೆಟಿಗರು ವಿವಿಧ ಜಾಗತಿಕ ಸ್ಪರ್ಧೆಗಳಲ್ಲಿ ತಮ್ಮ ಪಾಕಿಸ್ತಾನಿ ಸಹ ಆಟಗಾರರೊಂದಿಗೆ ಕೈಕುಲುಕಲುನಿರಾಕರಿಸಿದರು. ಏಷ್ಯಾ ಕಪ್ 2025ರ ಸಮಯದಲ್ಲಿ ಇದು ಪ್ರಾರಂಭವಾಯಿತು. ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾದಾಗಲೂ, ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ನಂತರ ಮತ್ತು ಪಂದ್ಯಗಳ ಮುಕ್ತಾಯದಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹಸ್ತಲಾಘವ ಮಾಡಲಿಲ್ಲ.
ಈ ವಿಡಿಯೋದಲ್ಲಿ, ಪಾಕಿಸ್ತಾನವು ಸ್ನೇಹಪರ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾದ ದೇಶವೆಂದು ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ತೋರಿಸುತ್ತದೆ ಮತ್ತು ಆಘಾ ಅವರು ಆತಿಥ್ಯದ ಕುರಿತು ಸಂಕ್ಷಿಪ್ತವಾಗಿ ಮಾತನಾಡುತ್ತಾರೆ.
ಆದರೆ, ಪ್ರೋಮೋದ ಅಂತಿಮ ಕ್ಷಣಗಳಲ್ಲಿ ಆಸ್ಟ್ರೇಲಿಯಾದ ಪ್ರವಾಸಿಗರೊಬ್ಬರು ಕಾರಿನಿಂದ ಇಳಿದು ಸುಮ್ಮನೆ ಹೋಗುತ್ತಿರುತ್ತಾರೆ. ಆ ಚಾಲಕ ನೀವು ಕೈಕುಲುಕದೆ ಹೋಗುತ್ತಿರುವಿರಿ ಎಂದು ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.'ಹ್ಯಾಂಡ್‌ಶೇಕ್ ಭೂಲ್ ಗಯೇ ಆಪ್, ಲಗ್ತಾ ಹೈ ಪಡೋಸಿಯೋಂ ಕೆ ಪಾಸ್ ಭಿ ರೂಕೆ ಥಾಯ್ (ನೀವು ಹ್ಯಾಂಡ್‌ಶೇಕ್ ಅನ್ನು ಮರೆತಿದ್ದೀರಿ; ನೀವು ನಮ್ಮ ನೆರೆಹೊರೆಯವರಂತೆ ಕಾಣಿಸುತ್ತಿರುವಿರಿ)' ಎಂದು ಚಾಲಕ ಹೇಳಿದ್ದಾನೆ.
ಇದು ಹ್ಯಾಂಡ್‌ಶೇಕ್ ವಿವಾದದ ಸ್ಪಷ್ಟ ಉಲ್ಲೇಖವಾಗಿದ್ದು, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ಐಸಿಸಿ ಜೊತೆಗಿನ ನಿಲುವಿನ ನಂತರ ಪಾಕಿಸ್ತಾನ ಏಷ್ಯಾ ಕಪ್ ಅನ್ನು ಮಧ್ಯದಲ್ಲಿಯೇ ತೊರೆಯುವುದಾಗಿ ಬೆದರಿಕೆ ಹಾಕಿತು.
ಭಾರತದ ವಿರುದ್ಧ ನಡೆದ ಪಂದ್ಯದ ಸಮಯದಲ್ಲಿ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಅವರನ್ನು ಏಷ್ಯಾ ಕಪ್‌ನಿಂದ ತಕ್ಷಣ ತೆಗೆದುಹಾಕಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒತ್ತಾಯಿಸಿತ್ತು. ಪೈಕ್ರಾಫ್ಟ್ ವಿರುದ್ಧ ಐಸಿಸಿಗೆ ಔಪಚಾರಿಕ ದೂರು ದಾಖಲಿಸಿತ್ತು.
ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಲಾಹೋರ್‌ನಲ್ಲಿ ಮೂರು ಟಿ20ಐ ಪಂದ್ಯಗಳನ್ನು ಆಡಲಿದೆ.
ಎರಡೂ ತಂಡಗಳು ಮೆಗಾ ಈವೆಂಟ್‌ಗೆ ಹೊರಡುವ ಮೊದಲು ಜನವರಿ 29, 31 ಮತ್ತು ಫೆಬ್ರುವರಿ 1 ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಹಗಲು-ರಾತ್ರಿ ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯವು ಭಾರತದಲ್ಲಿ ವಿಶ್ವಕಪ್ ಪಂದ್ಯಾವಳಿಯ ತನ್ನ ಗುಂಪು ಹಂತದ ಪಂದ್ಯಗಳನ್ನು ಆಡುತ್ತಿದ್ದರೆ, ಪಾಕಿಸ್ತಾನವು ತನ್ನ ಪಂದ್ಯಗಳಿಗಾಗಿ ಶ್ರೀಲಂಕಾದಲ್ಲಿ ನೆಲೆಸುತ್ತದೆ. 2022ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾವು ಟಿ20 ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದೆ. ಆ ವರ್ಷ ಟೆಸ್ಟ್ ಸರಣಿ ಮತ್ತು ವೈಟ್-ಬಾಲ್ ಕ್ರಿಕೆಟ್ ಆಡಲು ದೇಶಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು.