ಗುರುವಾರ ವಡೋದರಾದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ಪಂದ್ಯದಲ್ಲಿ ಸೋಫಿ ಡಿವೈನ್ ಅವರ ಅಜೇಯ ಅರ್ಧಶತಕ ಮತ್ತು ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ 45 ರನ್‌ಗಳ ಜಯ ಸಾಧಿಸಿತು. ಲಯಕ್ಕೆ ಮರಳಿದ ಡಿವೈನ್ ಅಜೇಯ 50 ರನ್ ಗಳಿಸಿ ತಂಡಕ್ಕೆ ನೆರವಾದರು. ಟಾಸ್ ಗೆದ್ದ ಯುಪಿಡಬ್ಲ್ಯೂ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಆರಂಭಿಕ ಅಡೆತಡೆಗಳಿಂದ ಚೇತರಿಸಿಕೊಂಡು 8 ವಿಕೆಟ್ ನಷ್ಟಕ್ಕೆ 153 ಸಾಧಾರಣ ಮೊತ್ತ ಗಳಿಸಿತು.
ಈ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ತಂಡವು ರನ್ ಕಲೆಹಾಕಲು ಸಾಕಷ್ಟು ಪರದಾಡಿತು. ಜೈಂಟ್ಸ್ ತಂಡವು ಸಾಮೂಹಿಕ ಬೌಲಿಂಗ್ ಪ್ರದರ್ಶನ ನೀಡಿ ಯುಪಿ ವಾರಿಯರ್ಸ್ ತಂಡವನ್ನು 17.3 ಓವರ್‌ಗಳಲ್ಲಿಯೇ ಕೇವಲ 108 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಮೂರು ಪಂದ್ಯಗಳ ಸತತ ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿತು.
ಗುಜರಾತ್ ಪರ, ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ 3 ವಿಕೆಟ್ ಪಡೆದು ಕೇವಲ 16 ರನ್ ನೀಡಿ ಉತ್ತಮ ಪ್ರದರ್ಶನ ನೀಡಿದರು. ಡಿವೈನ್ (3.3 ಓವರ್‌ಗಳಲ್ಲಿ 2/16) ಮತ್ತು ರೇಣುಕಾ ಸಿಂಗ್ (2/20) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಈ ಗೆಲುವಿನ ಮೂಲಕ ಆಡಿರುವ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಇದೀಗ ಈಗಾಗಲೇ ಅರ್ಹತೆ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರದ ಎರಡನೇ ಸ್ಥಾನ ಪಡೆದಿದೆ.
ಆಡಿರುವ ಐದು ಪಂದ್ಯಗಳಲ್ಲಿ ಐದರಲ್ಲೂ ಗೆಲುವು ಸಾಧಿಸುವ ಮೂಲಕ 10 ಅಂಕಗಳೊಂದಿಗೆ ಆರ್‌ಸಿಬಿ ಈಗಾಗಲೇ ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದರೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಗುಜರಾತ್ ಜೈಂಟ್ಸ್ ತಂಡವು ಆರು ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.
ಇತ್ತ ಮುಂಬೈ ಇಂಡಿಯನ್ಸ್ ತಂಡವು ಆಡಿರುವ ಆರು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿದ್ದು, ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದೆ. ಮುಂಬರುವ ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದರೆ ಮಾತ್ರ ಪ್ಲೇಆಫ್‌ಗೇರುವ ಅವಕಾಶ ಸಿಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆಡಿರುವ 5 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸುವ ಮೂಲಕ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಪ್ಲೇಆಫ್ ಹಾದಿ ಸುಗಮವಾಗಲಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಯುಪಿಡ್ಲ್ಯು ಆರಲಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.