ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದಿಂದ ಶಬರಿಮಲೆಗೆ ಅಪ್ಪಯ್ಯ ಮಾಲಾಧಾರಿಗಳು ತೆರಳುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ವಾಹನದ ಮೇಲಿನ ಕನ್ನಡ ಬಾವುಟಗಳನ್ನು ತೆಗೆಸಲಾಗಿತ್ತು. ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದ್ದು ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂತು. ಈಗ ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ನಟ ಕಿಚ್ಚ ಸುದೀಪ್ ನಮ್ಮ ಬಾವುಟವನ್ನು ಹಾರಿಸಿದ್ದಾರೆ.
ಸಿಸಿಎಲ್ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ vs ಭೋಜ್ಪುರಿ ದಬಾಂಗ್ ಪಂದ್ಯ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಿನ್ನೆ ನಡೆಯಿತು. ಈ ಪಂದ್ಯದಲ್ಲಿ ಭೋಜ್ ಪುರಿ ತಂಡವನ್ನು ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ 18 ರನ್ ಗಳಿಂದ ಮಣಿಸಿತ್ತು. ಇದರ ಬೆನ್ನಲ್ಲೇ ಮೈದಾನದಲ್ಲೇ ಸುದೀಪ್ ಕನ್ನಡದ ಬಾವುಟ ಹಾರಿಸಿದರು. ಈ ಮೂಲಕ ಕನ್ನಡದ ಬಾವುಟಕ್ಕೆ ಅವಮಾನ ಮಾಡಿದ ಅದೇ ನಾಡಲ್ಲಿ ಕನ್ನಡದ ಬಾವುಟವನ್ನು ಹಾರಿಸಿ ಕನ್ನಡಿಗರ ತಾಕತ್ತು ತೋರಿಸಿದ್ದಾರೆ.
ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ 3 ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು ಸ್ಟ್ರೈಕ್ ರೇಟ್ ನಿಂದಾಗಿ ಮೊದಲ ಸ್ಥಾನದಲ್ಲಿದೆ. ಬೆಂಗಾಲ್ ಟೈಗರ್ಸ್ ಸಹ ಆಡಿದ 3 ಪಂದ್ಯಗಳನ್ನು ಗೆದ್ದು 6 ಅಂಕ ಗಿಟ್ಟಿಸಿಕೊಂಡು 2ನೇ ಸ್ಥಾನದಲ್ಲಿದೆ. 3 ಪಂದ್ಯದಲ್ಲಿ 2 ಪಂದ್ಯ ಗೆದ್ದು ಕೇರಳ ಸ್ಟೈಕರ್ಸ್ 3ನೇ ಸ್ಥಾನ ಪಡೆದಿದ್ದು 3 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದು ಒಳ್ಳೆಯ ನೆಟ್ ರನ್‌ರೇಟ್ ಕಾರಣಕ್ಕೆ ಪಂಜಾಬ್ ದೆ ಶೇರ್ 4ನೇ ಸ್ಥಾನದಲ್ಲಿದೆ. ಈ 4 ತಂಡಗಳು ಸೆಮಿಫೈನಲ್ ಹಂತ ಏರುವುದು ಬಹುತೇಕ ಖಚಿತವಾಗಿದೆ.
ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಈವರೆಗೆ 2 ಬಾರಿ ಟ್ರೋಫಿ ಗೆದ್ದಿದೆ. ಕಳೆದ ಸೀಸನ್‌ನಲ್ಲಿ ಪ್ರಬಲ ತಂಡ ಎಂದೇ ಗುರ್ತಿಸಿಕೊಂಡಿದ್ದ ಸುದೀಪ್ ಪಡೆ ನಿರಾಸೆ ಅನುಭವಿಸಿತ್ತು. ಆದರೆ ಈ ಬಾರಿ 3 ಪಂದ್ಯ ಗೆದ್ದು ಬೀಗಿದೆ. ತೆಲುಗು ವಾರಿಯರ್ಸ್ ಹಾಗೂ ಪಂಜಾಬ್ ದೆ ಶೇರ್ ರೀತಿಯ ಘಟಾನುಘಟಿ ತಂಡಗಳನ್ನು ಸೋಲಿಸಿದೆ.