ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2026ರಲ್ಲಿ ಭಾಗವಹಿಸುವಿಕೆ ಕುರಿತ ಗೊಂದಲ ಮುಂದುವರೆದಿದ್ದು, ಇದೀಗ ಪಿಸಿಬಿ ICC ಈವೆಂಟ್ ಅನ್ನೇ ಮುಂದೂಡಿದೆ.
ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರೊಂದಿಗಿನ ಪಾಕಿಸ್ತಾನದ ಅಹಿತಕರ ಸಂಬಂಧವು ಶನಿವಾರ ಮತ್ತೊಂದು ಹಂತ ಪ್ರವೇಶಿಸಿದ್ದು, ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾಗವಹಿಸುವಿಕೆಯ ಸಸ್ಪೆನ್ಸ್ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ 2026 ರ ಈವೆಂಟ್ ಅನ್ನು ರದ್ದುಗೊಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ರಾಷ್ಟ್ರೀಯ ತಂಡದ ವಿಶ್ವಕಪ್ ಕಿಟ್‌ನ ಯೋಜಿತ ಅನಾವರಣ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. "ಅನಿವಾರ್ಯ ಸಂದರ್ಭ"ಗಳನ್ನು ಉಲ್ಲೇಖಿಸಿ ಪಿಸಿಬಿ ಕಾರ್ಯಕ್ರಮ ರದ್ದು ಮಾಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಐ ಪಂದ್ಯದ ಟಾಸ್ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಕಿಟ್ ಅನಾವರಣ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅದನ್ನು ದಿಢೀರ್ ರದ್ದು ಮಾಡಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಗೇ ಪಾಕ್ ತಂಡ ಡೌಟ್!
ಮೂಲಗಳ ಪ್ರಕಾರ, ಕಿಟ್ ಬಿಡುಗಡೆಯನ್ನು ಮುಂದೂಡುವ ನಿರ್ಧಾರವು ದೇಶದ ವಿದೇಶಾಂಗ ಕಚೇರಿಯಿಂದ ಔಪಚಾರಿಕ ಅನುಮತಿಯ ಕೊರತೆಗೆ ನೇರವಾಗಿ ಸಂಬಂಧಿಸಿದೆ. ಇದು ಸೋಮವಾರ ಅವರ ಭಾಗವಹಿಸುವಿಕೆಯ ಕುರಿತು ಅಂತಿಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಲಂಕಾ ಪಯಣಕ್ಕೆ ಪಾಕ್ ಸಿದ್ಧತೆ
"ವಿಶ್ವಕಪ್ ತಂಡವು ಫೆಬ್ರವರಿ 2 ರಂದು ಮುಂಜಾನೆ ಕೊಲಂಬೊಗೆ ಹೊರಡಲು ಪಿಸಿಬಿ ಈಗಾಗಲೇ ಪ್ರಯಾಣ ವ್ಯವಸ್ಥೆಗಳನ್ನು ಮಾಡಿದೆ" ಎಂದು ಮೂಲವೊಂದು ತಿಳಿಸಿದೆ.