ಶ್ರೇಯಸ್ ಅಯ್ಯರ್ 
ಕ್ರಿಕೆಟ್

'ಸೋಲಿಗೆ ಹೆದರಬೇಡಿ': ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಯುವ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಂದೇಶ!

'ನಮ್ಮಲ್ಲಿ ಕೆಲವರು ಇಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ. ಹಾಗಾಗಿ ನಾವು ಎಷ್ಟು ಬೇಗನೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇವೆಯೋ, ಅಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ' ಎಂದು ಅಯ್ಯರ್ ಕರೆ ನೀಡಿದರು.

ಇಂಗ್ಲೆಂಡ್‌ನಲ್ಲಿ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ, ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಆಟಗಾರರು ನಿರ್ಭಯವಾಗಿ ಕ್ರಿಕೆಟ್ ಆಡಬೇಕೆಂದು ಮತ್ತು ಟೀಕೆಗಳಿಗೆ ಮಣಿಯಬಾರದೆಂದು ಬಯಸಿದ್ದಾರೆ; ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮುನ್ನಾದಿನದಂದು ಮಾತನಾಡಿದ ಅವರು, ಇತ್ತೀಚಿನ ಹಿನ್ನಡೆಗಳು ತಂಡವನ್ನು ಇನ್ನಷ್ಟು ಒಗ್ಗೂಡಿಸಿವೆ ಎಂದು ಹೇಳಿದರು.

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿ ಸೋಲು ಅನುಭವಿಸಿದ ಬಳಿಕ ಭಾರತ ತಂಡವು ಜಿಂಬಾಬ್ವೆಗೆ ಆಗಮಿಸಿದೆ. 'ಇಂಗ್ಲೆಂಡ್‌ನಲ್ಲಿ ನಾವು ಕಠಿಣ ಹಂತವನ್ನು ಎದುರಿಸಿದೆವು. ಆದರೆ ಅದರಿಂದ ಸಾಕಷ್ಟು ಸಕಾರಾತ್ಮಕ ಅಂಶಗಳು ಕೂಡ ದೊರೆತವು. ಮುಂದಿನ ದಿನಗಳಲ್ಲಿ ತಂಡವಾಗಿ ನಾವು ಏನನ್ನು ರೂಪಿಸಿಕೊಳ್ಳಬೇಕು ಹಾಗೂ ಮೈದಾನಕ್ಕಿಳಿದಾಗ ಯಾವ ರೀತಿಯ ಮಾನಸಿಕ ಸ್ಥಿತಿ, ಜಾಗರೂಕತೆ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಎಂಬುದು ನಮಗೆ ಅರಿವಾಯಿತು' ಎಂದು ಮೊದಲ ಟಿ20 ಪಂದ್ಯದ ಮುನ್ನಾದಿನದಂದು ಅಯ್ಯರ್ ಹೇಳಿದರು.

ಸೂರ್ಯಕುಮಾರ್ ಯಾದವ್ ಅವರಿಂದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ನಂತರ ಶ್ರೇಯಸ್ ಅಯ್ಯರ್ ಐರ್ಲೆಂಡ್ ಮತ್ತು ಇಂಗ್ಲೆಂಡ್‌ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಮೊದಲ ಬಾರಿಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ನಾಯಕ, ಅಲ್ಪಾವಧಿಯಲ್ಲಿ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದೇ ಅತಿದೊಡ್ಡ ಸವಾಲಾಗಿರುತ್ತದೆ ಎಂದು ಹೇಳಿದರು.

'ನಮ್ಮಲ್ಲಿ ಕೆಲವರು ಇಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ. ಹಾಗಾಗಿ ನಾವು ಎಷ್ಟು ಬೇಗನೆ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುತ್ತೇವೆಯೋ, ಅಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ' ಎಂದು ಅಯ್ಯರ್ ಕರೆ ನೀಡಿದರು.

'ತಂಡದ ಯುವ ಆಟಗಾರರು ಸೋಲಿಗೆ ಹೆದರಬೇಕೆಂದು ನಾನು ಭಾವಿಸುವುದಿಲ್ಲ; ಏಕೆಂದರೆ ಮನಸ್ಸಿನ ಮೂಲೆಯಲ್ಲಿ ಅಂತಹ ಆಲೋಚನೆಗಳಿದ್ದಾಗ, ಆಟಗಾರರು ಕೇವಲ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಆಡುತ್ತಾರೆ. ಆದರೆ ಆ ಭಯವಿಲ್ಲದಿದ್ದಾಗ ಮಾತ್ರ, ತಮ್ಮ ಅತ್ಯುತ್ತಮ ಆಟವನ್ನು ಹೊರತರುವ ಸಾಧ್ಯತೆ ಇರುತ್ತದೆ' ಎಂದು ತಿಳಿಸಿದರು.

'ಹೊರಗಡೆ ಜನರು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ನಾವು ವರ್ತಮಾನದತ್ತ ಗಮನಹರಿಸಬೇಕು. ನಾವು ಎಷ್ಟರಮಟ್ಟಿಗೆ ಉತ್ತಮ ಕ್ರಿಕೆಟ್ ಆಡುತ್ತೇವೆಯೋ ಮತ್ತು ಒಗ್ಗಟ್ಟಿನಿಂದ ಆಡುತ್ತೇವೆಯೋ, ಅಷ್ಟರಮಟ್ಟಿಗೆ ಅದು ತಂಡಕ್ಕೆ ಒಳಿತಾಗುತ್ತದೆ. ಇದು ಖಂಡಿತವಾಗಿಯೂ ಬಹಳ ಸವಾಲಿನ ವಿಷಯ. ನಾವು ನಿನ್ನೆ ಬಂದೆವು, ಇಂದು ಅಭ್ಯಾಸ ಮತ್ತು ನಾಳೆ ಪಂದ್ಯವಿದೆ. ಆದರೆ ಇದೊಂದು ಮೋಜಿನ ಅನುಭವ; ಇಂತಹ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡಿದಾಗ, ನಿಮ್ಮ ಬಗ್ಗೆ ನಿಮಗೇ ಖುಷಿಯಾಗುತ್ತದೆ. ಐರ್ಲೆಂಡ್, ಇಂಗ್ಲೆಂಡ್ ಮತ್ತು ಈಗ ಜಿಂಬಾಬ್ವೆಯಲ್ಲಿ ಭಾರತ ತಂಡವು ಆಡಿರುವ ಸರಣಿಗಳು ಮೌಲ್ಯಯುತ ಅನುಭವವನ್ನು ನೀಡಿವೆ' ಎಂದು ಹೇಳಿದರು.

ಫಲಿತಾಂಶಗಳು ನಮಗೆ ಪೂರಕವಾಗಿರಲಿಲ್ಲ, ಆದರೆ ಇದು ತಂಡದ ಸದಸ್ಯರನ್ನು ಪರಸ್ಪರ ಇನ್ನಷ್ಟು ಹತ್ತಿರವಾಗಿಸಿದೆ. ಮುಂದಿನ ದಿನಗಳಲ್ಲಿ ಒಂದು ತಂಡವಾಗಿ ಹೇಗೆ ಆಡಬೇಕು ಎಂಬುದರ ಕುರಿತು ನಾವು ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದೇವೆ. ಇದು ಉತ್ತಮ ಅನುಭವವನ್ನು ನೀಡುವಂತಹ ಸಂದರ್ಭ, ಏಕೆಂದರೆ ಇಂತಹ ಅವಕಾಶಗಳು ಪದೇ ಪದೆ ಸಿಗುವುದಿಲ್ಲ. ಇದು ಸವಾಲಿನ ಹಂತ; ಇದನ್ನು ಎಷ್ಟು ಬೇಗನೆ ನಾವು ದಾಟುತ್ತೇವೆಯೋ, ಅಷ್ಟೇ ಉತ್ತಮ ತಂಡವಾಗಿ ನಾವು ರೂಪುಗೊಳ್ಳುತ್ತೇವೆ. ಐಪಿಎಲ್ (IPL) ಅನುಭವವಿರುವ ಹಲವು ಆಟಗಾರರನ್ನು ಹೊಂದಿರುವ ಜಿಂಬಾಬ್ವೆ ತಂಡವು ಅತ್ಯಂತ ಸ್ಪರ್ಧಾತ್ಮಕವಾಗಿದೆ ಎಂದು 31 ವರ್ಷದ ಈ ಆಟಗಾರ ಬಣ್ಣಿಸಿದರು.

ಗಾಯದಿಂದ ಚೇತರಿಸಿಕೊಂಡು ಮರಳಿದ ಕುರಿತು ಮಾತನಾಡಿದ ಅಯ್ಯರ್, ಆ ಚೇತರಿಕೆಯ ಅವಧಿಯು ತಮ್ಮನ್ನು ಮಾನಸಿಕವಾಗಿ ಬಲಪಡಿಸಿದೆ. ಇದು ವ್ಯಕ್ತಿಯಾಗಿ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗಾಯದ ಸಮಸ್ಯೆಯ ಹಂತವನ್ನು ದಾಟಿ ಬಂದಾಗ, ಅದು ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ. ಮೈದಾನದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಎಷ್ಟು ತ್ವರಿತವಾಗಿ ನಿಭಾಯಿಸಬಹುದು ಎಂಬುದು ಆಗ ನಮಗೆ ತಿಳಿದಿರುತ್ತದೆ ಎಂದರು.

15 ವರ್ಷದ ವೈಭವ್ ಸೂರ್ಯವಂಶಿ ಅವರ ಐತಿಹಾಸಿಕ ಭಾರತೀಯ ತಂಡದ ಪದಾರ್ಪಣೆಯು ನಿರೀಕ್ಷೆಯಂತೆ ನಡೆಯಲಿಲ್ಲ. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಅನುಭವವು ಸೂರ್ಯವಂಶಿ ಹಾಗೂ ತಂಡದ ಇತರ ಯುವ ಆಟಗಾರರಿಗೆ ಹೆಚ್ಚಿನ ಪರಿಣತಿಯನ್ನು ನೀಡಲಿದೆ ಎಂದು ಅಯ್ಯರ್ ಹೇಳಿದರು.

ಎಲ್ಲ ಯುವ ಆಟಗಾರರು ಖಂಡಿತವಾಗಿಯೂ ಅಭ್ಯಾಸ ನಡೆಸಿದ್ದಾರೆಂದೇ ನಾನು ಭಾವಿಸುತ್ತೇನೆ. ಟಿ20 ಸರಣಿಯ ನಂತರ ಸಾಕಷ್ಟು ಸಮಯಾವಕಾಶವಿತ್ತು. ಆದ್ದರಿಂದ, ಅವರು (ಸೂರ್ಯವಂಶಿ) ಎಲ್ಲಿ ತಪ್ಪು ಮಾಡಿದ್ದರೋ ಅದನ್ನು ಖಂಡಿತವಾಗಿಯೂ ಸರಿಪಡಿಸಿಕೊಂಡಿರಬೇಕು. ಹೀಗಾಗಿ, ವೈಯಕ್ತಿಕವಾಗಿ ನಾನು ಅವರಿಗೆ ಹೆಚ್ಚಿನ ಸಲಹೆ ನೀಡುವ ಅಗತ್ಯವಿಲ್ಲ ಎಂದು ಅಯ್ಯರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

ದುಲೀಪ್ ಟ್ರೋಫಿ ಫೈನಲ್‌: ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್

‘ಓವರ್‌ಟೇಕ್‌ ಎಡವಟ್ಟು, ಮೂರೇ ಸೆಕೆಂಡ್ ನಲ್ಲಿ ದುರಂತ!’; ಮಂಡ್ಯದಲ್ಲಿ ಭೀಕರ ಕಾರು ಅಪಘಾತ: ಮಹಿಳೆ ಸಾವು, Video Viral