ಐಪಿಎಲ್ ತಂಡದ ಮಾಲೀಕರು ತಂಡದ ಆಟಗಾರರ ಆಯ್ಕೆಯಲ್ಲಿ ಪ್ರಭಾವ ಬೀರುತ್ತಾರೆ ಎಂಬುದು ಆಗ್ಗಾಗ್ಗೆ ನಿರ್ದಿಷ್ಟ ಪುರಾವೆಗಳಿಲ್ಲದೆ ಹೆಚ್ಚಾಗಿ ಚರ್ಚಿಸಲ್ಪಡುವ ವಿಷಗಳಲ್ಲಿ ಒಂದಾಗಿದೆ. ಪ್ರತಿವರ್ಷ ನೂರಾರು ಕೋಟಿ ರೂಪಾಯಿಗಳನ್ನು ಸುರಿಯುವ ಐಪಿಎಲ್ ಮಾಲೀಕರು, ತಂಡದೆಡೆಗೆ ಸಾಕಷ್ಟು ಉತ್ಸಾಹದಿಂದಿರುತ್ತಾರೆ. ಅನೇಕರು ಕ್ರೀಡಾಂಗಣದಲ್ಲಿ ತಮ್ಮ ತಂಡಗಳನ್ನು ಬೆಂಬಲಿಸುವುದನ್ನು ಕಾಣಬಹುದು. ಆದರೆ, ಅದಷ್ಟೇ ಅಲ್ಲದೆ ಅವರು ತಂಡದ ಆಯ್ಕೆ ಪ್ರಕ್ರಿಯೆಯಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬರ್ಥದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಾರೆ ಲಿಯಾಮ್ ಲಿವಿಂಗ್‌ಸ್ಟನ್ ಮಾತನಾಡಿದ್ದಾರೆ.
ಐಪಿಎಲ್ 2026ನೇ ಆವೃತ್ತಿಯಲ್ಲಿ ತಮಗಾದ ಅನುಭವವನ್ನೇ ಉದಾಹರಣೆಯನ್ನಾಗಿ ನೀಡಿದ್ದಾರೆ. ಇಂಗ್ಲೆಂಡ್ ಸ್ಪಿನ್-ಆಲ್‌ರೌಂಡರ್ ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದರು. 1 ಮತ್ತು 14 ರನ್ ಗಳಿಸಿದರು. ಆದರೆ, ಮತ್ತೊಬ್ಬ ಆಟಗಾರನಿಗೆ ಆದ್ಯತೆ ನೀಡಲಾಯಿತು. ಏಕೆಂದರೆ, ಮಾಲೀಕರಿಗೆ ಅವರನ್ನು ಕಂಡರೆ ತುಂಬಾ ಪ್ರೀತಿ. ಎಸ್‌ಆರ್‌ಎಚ್ ಪ್ಲೇಯಿಂಗ್ XI ನಲ್ಲಿ ಮೂವರು ವಿದೇಶಿ ಆಟಗಾರರನ್ನು ಆಡಿಸಿತು. ಆದರೆ, ಆಟಗಾರರಿಗೆ ನ್ಯಾಯಯುತ ಅವಕಾಶ ನೀಡಲಿಲ್ಲ ಎಂದು ಲಿವಿಂಗ್‌ಸ್ಟನ್ ಹೇಳಿದರು.
'ಐಪಿಎಲ್‌ನಲ್ಲಿ ಮೂರು ರೀತಿಯ ಆಟಗಾರರು ಇರುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೆಲವು ಆಟಗಾರರು ತಂಡದಲ್ಲಿ ಖಚಿತವಾಗಿರುತ್ತಾರೆ. ಕೆಲವರು ಅಂಚಿನಲ್ಲಿರುತ್ತಾರೆ, ಅಂದರೆ ಅವರು ಆಡಬಹುದು ಅಥವಾ ಆಡದೇ ಇರಬಹುದು ಮತ್ತು ಮೂರನೆಯವರು ನನ್ನಂತೆ, ಅವಕಾಶಗಳನ್ನು ಪಡೆಯುವ ಸಾಧ್ಯತೆ ಇರುವುದಿಲ್ಲ.
SRH ಹರಾಜಿನಲ್ಲಿ ಸಲೀಲ್ ಅರೋರಾ ಅವರನ್ನು ಖರೀದಿಸಿತು. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಬಯಸಿತ್ತು. ಆದರೆ, SRH ಬಳಿ ಹೆಚ್ಚಿನ ಹಣವಿದ್ದಿದ್ದರಿಂದ ಅವರನ್ನು ಖರೀದಿಸಿತು. ಅದಷ್ಟೇ ಅಲ್ಲದೆ, ಮಾಲೀಕರಿಗೆ ಅರೋರಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಆದ್ದರಿಂದ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಯಿತು. ಪ್ಯಾಟ್ ಕಮ್ಮಿನ್ಸ್ ಲಭ್ಯವಿಲ್ಲದಿದ್ದಾಗ, ನಾವು ಕೇವಲ ಮೂವರು ವಿದೇಶಿ ಆಟಗಾರರ ಜೊತೆ ಆಡುತ್ತಿದ್ದೆವು. ಹಾಗಾಗಿ ನಾನು ಡೇನಿಯಲ್ ವೆಟ್ಟೋರಿ ಅವರನ್ನು ನಾವು ಕೇವಲ ಮೂರು ವಿದೇಶಿ (ಆಟಗಾರರ) ಜೊತೆ ಏಕೆ ಆಡುತ್ತಿದ್ದೇವೆ ಎಂದು ಕೇಳಿದೆ' ಆರ್‌ಸಿಬಿ ಮಾಜಿ ಆಟಗಾರ ಲಿವಿಂಗ್‌ಸ್ಟನ್ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.
'ಅದಕ್ಕವರು, 'ಫ್ರಾಂಚೈಸಿ ಮಾಲೀಕರು ಈ ಹುಡುಗನನ್ನು ಪ್ರೀತಿಸುತ್ತಾರೆ. ಕಮ್ಮಿನ್ಸ್ ಮರಳಿ ಬಂದಾಗ ನಾವು ನಮ್ಮ ಆಟವನ್ನು ಬದಲಿಸುವುದಿಲ್ಲ' ಎಂದು ಹೇಳಿದರು. ಅದು ಅದ್ಭುತವಾಗಿದೆ. ಯಾರಾದರೂ ಗಾಯಗೊಂಡ ಹೊರತು ನಾನು ಆಡುವುದಿಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನೀವು ಆಡುವುದಿಲ್ಲ ಎಂದು ನಿಮಗೆ ತಿಳಿದಾಗ ಅದು ಸಂಪೂರ್ಣವಾಗಿ ವಿಭಿನ್ನ ಮನಸ್ಥಿತಿಯಾಗಿರುತ್ತದೆ' ಎಂದು ಹೇಳಿದರು.
'ಈ ಮಾಲೀಕರು ಯಾವ ಪರಿಣತಿಯನ್ನು ಹೊಂದಿದ್ದಾರೆ?' ಎಂದು ಕ್ರಿಕೆಟ್ ತಜ್ಞ ಡೇವಿಡ್ ಲಾಯ್ಡ್ ಕೇಳಿದರು.
'ಬಹಳಷ್ಟು ಹಣ' ಎಂದು ಅದೇ ಪಾಡ್‌ಕಾಸ್ಟ್‌ನ ಭಾಗವಾಗಿದ್ದ ಅಲಸ್ಟೇರ್ ಕುಕ್ ಉತ್ತರಿಸಿದರು.
'ಅವರು ಸಂಪೂರ್ಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೆ ಸ್ಪಷ್ಟವಾಗಿ ಒಂದು ಅಭಿಪ್ರಾಯವಿದೆ. ಆದರೆ, ಈ ವರ್ಷ ಡೇನಿಯಲ್ ವೆಟ್ಟೋರಿಯಿಂದ ನನಗೆ ತಿಳಿದ ದೊಡ್ಡ ವಿಷಯವೆಂದರೆ ಅವರು ಏನು ನಡೆಯುತ್ತಿದೆ ಎಂದು ನನಗೆ ಹೇಳಿದ್ದು. ನನಗೆ ತಿಳಿದಿತ್ತು' ಎಂದು ಲಿವಿಂಗ್‌ಸ್ಟನ್ ಹೇಳಿದರು.
SRH ತಂಡದ ಸಹ-ಮಾಲೀಕತ್ವ ಕಾವ್ಯ ಮಾರನ್ ಅವರದ್ದಾಗಿದೆ. ತಂಡವು ಐಪಿಎಲ್ 2026ರ ಪ್ಲೇಆಫ್‌ಗೆ ಪ್ರವೇಶಿಸಿತು. ಆದರೆ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿತು.