ಧರ್ಮಶಾಲಾ: ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ಭಾರತಕ್ಕೆ ಗೆಲ್ಲಲು 195 ರನ್ ಗಳ ಬೃಹತ್ ಗುರಿ ನೀಡಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಆಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.
ಮಳೆಯಿಂದಾಗಿ ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಉಭಯ ತಂಡಗಳಿಗೆ ತಲಾ 25 ಓವರ್ ಸೀಮಿತಗೊಳಿಸಲಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 24.5 ಓವರ್ ನಲ್ಲಿ 194 ರನ್ ಗಳಿ ಆಲೌಟ್ ಆಯಿತು.
ಆಫ್ಘಾನಿಸ್ತಾನ ಪರ ರೆಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 51 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 102 ರನ್ ಪೇರಿಸಿದರು. ಅಲ್ಲದೆ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಆಫ್ಘಾನಿಸ್ತಾನ ಪರ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾದರು.
ಗುರ್ಬಾಜ್ ವಿಕೆಟ್ ಪತನ ಬಳಿಕ ಆಫ್ಘಾನ್ ಬ್ಯಾಟಿಂಗ್ ಕೊಂಚ ಮಂಕಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಹಷ್ಮತುಲ್ಲಾ ಶಾಹಿದಿ (27) ಮತ್ತು ಒಮರ್ಝೈ (26) ಆಫ್ಘಾನಿಸ್ತಾನ 150 ಗಡಿದಾಟಲು ನೆರವಾದರು. ಉಳಿದಂತೆ ಆಫ್ಘಾನಿಸ್ತಾನ ಎಲ್ಲ ಬ್ಯಾಟರ್ ಗಳೂ ಒಂದಂಕಿ ಮೊತ್ತಕ್ಕೆ ಔಟಾದರು. ಅಂತಿಮವಾಗಿ ಆಫ್ಘಾನಿಸ್ತಾನ 24.5 ಓವರ್ ನಲ್ಲಿ 194 ರನ್ ಗಳಿಸಿ ಆಲೌಟ್ ಆಯಿತು.
ಭಾರತದ ಪರ ಗುರ್ನೂರ್ ಬ್ರಾರ್ ಮತ್ತು ಹರ್ಶ್ ದುಬೆ ತಲಾ 3 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಪಡೆದರು.