36 ವರ್ಷದ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಭಾನುವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ತಮ್ಮ 4 ಓವರ್‌ಗಳಲ್ಲಿ 23 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ, ಐಪಿಎಲ್ 2026ರಲ್ಲಿ ಮತ್ತೊಮ್ಮೆ ಪರ್ಪಲ್ ಕ್ಯಾಪ್ ಮಾಲೀಕರಾದರು. ಅನುಭವಿ ವೇಗಿ 11 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 43 ಓವರ್ ಬೌಲ್ ಮಾಡಿರುವ ಅವರು 7.46ರ ಎಕಾನಮಿಯಲ್ಲಿ 321 ರನ್‌ಗಳನ್ನು ನೀಡಿದ್ದಾರೆ.
ರಿಯಾನ್ ರಿಕಲ್ಟನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಗೋಲ್ಡನ್ ಡಕೌಟ್ ಮಾಡಿದರು ಮತ್ತು ನಂತರ 57 ರನ್ ಗಳಿಸಿದ್ದ ತಿಲಕ್ ವರ್ಮಾ ಅವರ ವಿಕೆಟ್ ಕಬಳಿಸಿ ಮುಂಬೈ ತಂಡಕ್ಕೆ ಸಂಕಷ್ಟ ತಂದೊಡ್ಡಿದರು. ಭುವಿ ಆರ್‌ಸಿಬಿ ಪರ ಆಡಿರುವ ಪ್ರತಿಯೊಂದು ಪಂದ್ಯದಲ್ಲೂ ಸ್ಥಿರ ಮತ್ತು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅತ್ಯಂತ ಸ್ಮರಣೀಯವಾದದ್ದು ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ರನ್ ನೀಡಿ 3 ವಿಕೆಟ್ ಪಡೆದದ್ದು.
ಮತ್ತೊಂದೆಡೆ ಪ್ರಿನ್ಸ್ ಯಾದವ್ ಮತ್ತು ಅಂಶುಲ್ ಕಾಂಬೋಜ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಯುವಕರು ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಸಿದ್ಧ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತ ಅನುಭವಿ ಬೌಲರ್ ಆಗಿರುವ ಭುವಿ ಕೂಡ ತಂಡಕ್ಕೆ ಮರಳಲು ಅರ್ಹರು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. 2022ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡಕ್ಕಾಗಿ ಅವರು ಆಡಿದ್ದರು.
ಭಾರತ ತಂಡದಿಂದ ಹೊರಗುಳಿದ ಸಮಯದಿಂದಲೂ, ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. 2023ರಲ್ಲಿ, SRH ಪರ 14 ಪಂದ್ಯಗಳಲ್ಲಿ, ಅವರು 16 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಐದು ವಿಕೆಟ್ ಗೊಂಚಲು ಸೇರಿದೆ. ಅವರ ಎಕಾನಮಿ 8.33 ಆಗಿತ್ತು. ಮುಂದಿನ ವರ್ಷ, ಅದೇ ತಂಡಕ್ಕಾಗಿ 14 ಪಂದ್ಯಗಳಲ್ಲಿ, ಅವರು 9.35ರ ಎಕಾನಮಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದರು. ಕಳೆದ ಆವೃತ್ತಿಯಲ್ಲಿ RCB ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದಾಗ, 14 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದರು.
ಈ ವರ್ಷ ಅವರು ಪವರ್‌ಪ್ಲೇ, ಮಿಡಲ್ ಓವರ್‌ಗಳು ಮತ್ತು ಡೆತ್‌ನಲ್ಲಿ ಬೌಲಿಂಗ್ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಪಿಪಿಯಲ್ಲಿ, ಅವರು 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲಿ ಅವರ ಎಕಾನಮಿ ಕೇವಲ 7 ಮತ್ತು ಡಾಟ್ ಶೇಕಡಾವಾರು 51.4 ರಷ್ಟಿದೆ. ಮಿಡಲ್ ಓವರ್‌ಗಳಲ್ಲಿ, 7 ಓವರ್‌ಗಳನ್ನು ಬೌಲಿಂಗ್ ಮಾಡಿದ ಅವರು ಕೇವಲ 59 ರನ್‌ಗಳನ್ನು ನೀಡಿದ್ದಾರೆ, 2 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಮತ್ತು ಡೆತ್‌ನಲ್ಲಿ, ಅವರು 72 ಎಸೆತಗಳಲ್ಲಿ 94 ರನ್ ನೀಡಿದ್ದಾರೆ ಮತ್ತು 9 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಂದ್ಯದ ಎಲ್ಲಾ ಸನ್ನಿವೇಶಗಳಿಗೂ ಅತ್ಯುತ್ತಮ ಬೌಲರ್ ಆಗಿದ್ದಾರೆ.
ಟಿ20ಐ ತಂಡವು ಕೆಲವು ತಿಂಗಳ ಹಿಂದೆಯಷ್ಟೇ ವಿಶ್ವಕಪ್ ಗೆದ್ದಿತ್ತು ಮತ್ತು ಸದ್ಯ ಅಂತಹ ಯಾವುದೇ ಖಾಲಿ ಹುದ್ದೆ ಇಲ್ಲ. ಆದರೆ, ಭಾರತದ ಮುಂಚೂಣಿಯಲ್ಲಿರುವ ಜಸ್ಪ್ರೀತ್ ಬುಮ್ರಾ ಎಲ್ಲ ಪಂದ್ಯಗಳನ್ನು ಆಡುವುದಿಲ್ಲ ಎಂಬ ಅಂಶವು ತಂಡವು ಈ ಅನುಭವಿ ಆಟಗಾರನನ್ನು ಬಳಸಿಕೊಳ್ಳಬಹುದಾಗಿದೆ. ಮುಂದಿನ ಕೆಲವು ತಿಂಗಳುಗಳಿಗೆ ಟೀಂ ಇಂಡಿಯಾದ ಕ್ಯಾಲೆಂಡರ್ ತುಂಬಿದೆ. ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅವರನ್ನು ಪ್ರಯತ್ನಿಸಬಹುದು.
50 ಓವರ್‌ಗಳ ವಿಶ್ವಕಪ್‌ಗೆ ಕೇವಲ ಒಂದು ವರ್ಷ ಬಾಕಿ ಇದ್ದು, ಭುವಿ ಅವರನ್ನು ಪರಿಗಣಿಸಬಹುದು. ಏಕದಿನ ಪಂದ್ಯಗಳಿಲ್ಲದಿದ್ದರೂ, ಭಾರತ ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಮತ್ತು ನಂತರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ 5 ಟಿ20ಐಗಳನ್ನು ಆಡಲಿದೆ. ಅದಾದ ನಂತರ, ಜಿಂಬಾಬ್ವೆಯಲ್ಲಿ ಟಿ20 ಐಗಳು, ನಂತರ ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ಸರಣಿ ಮತ್ತು ಡಿಸೆಂಬರ್‌ನಲ್ಲಿ ಶ್ರೀಲಂಕಾ ಸರಣಿ ನಡೆಯಲಿದೆ.
ಭಾರತ ಆಡುವ ಪಂದ್ಯಗಳ ಸಂಖ್ಯೆ, ಆಟಗಾರರ ಪ್ರದರ್ಶನ, ವಿಕೆಟ್ ಪಡೆಯುವ ಸಾಮರ್ಥ್ಯ ಮತ್ತು ಫಿಟ್ನೆಸ್ - ಇವುಗಳಲ್ಲಿ ಯಾವುದೂ ಈಗ ಭುವನೇಶ್ವರ್ ಕುಮಾರ್ ಅವರಿಗೆ ಕಳವಳಕಾರಿಯಾಗಿಲ್ಲ. ಆದರೆ ಕೊನೆಯಲ್ಲಿ, ಅವರನ್ನು ಆಯ್ಕೆ ಮಾಡುವ ವಿಷಯ ಮುಖ್ಯವಾಗುತ್ತದೆ. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭುವಿ ಅವರನ್ನು T20I ತಂಡಕ್ಕೆ ಸೇರಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಹಿಂದೆ, ಆಯ್ಕೆದಾರರು ಏಕದಿನ ಪಂದ್ಯಗಳಲ್ಲಿ ಅಶ್ವಿನ್ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಕರುಣ್ ನಾಯರ್ ಸೇರಿದಂತೆ ಕ್ರಿಕೆಟಿಗರಿಗೆ ಎರಡನೇ ಅವಕಾಶ ನೀಡಿದ್ದಾರೆ.