ಮುಂಬೈ: ಸತತ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಹಾಲಿ ಮೂರು ಐಪಿಎಲ್ ತಂಡಗಳ ನಾಯಕರು ತಮ್ಮ ನಾಯಕತ್ವ ಹುದ್ದೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯೊಂದು ಬಹಿರಂಗಗೊಳಿಸಿದೆ.
ಹೌದು.. IPL 2026 ಸೀಸನ್‌ನಲ್ಲಿ ನಿರಾಶಾಜನಕ ಪ್ರದರ್ಶನದ ಬಳಿಕ ಮೂರು ಪ್ರಮುಖ ಫ್ರಾಂಚೈಸಿಗಳ ನಾಯಕರು ತಮ್ಮ ತಮ್ಮ ನಾಯಕತ್ವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಸಂಚಲನಕಾರಿ ವರದಿ ಹೊರಬಿದ್ದಿದೆ.
ಮೂಲಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಸರ್ ಪಟೇಲ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಬ್ ಪಂತ್ ನಾಯಕತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಈ 3 ನಾಯಕರುಗಳ ನಾಯಕತ್ವದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಎರಡು ಸತತ ಸೀಸನ್‌ಗಳಲ್ಲಿ ತಮ್ಮ ತಂಡಗಳನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ವಿಫಲವಾದ ಈ ನಾಯಕರು ಈಗ ಫ್ರಾಂಚೈಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಕ್ನೋ ಸೂಪರ್ ಜೈಂಟ್ಸ್
ಈಗಾಗಲೇ ಐಪಿಎಲ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿರುವ Lucknow Super Giants ತಂಡಕ್ಕೆ ರಿಷಬ್ ಪಂತ ನಾಯಕತ್ವ ವಹಿಸಿದ್ದರು. ಎರಡು ಸತತ ಸೀಸನ್‌ಗಳಲ್ಲಿ ನಿರಾಸೆ ಮೂಡಿಸಿದ ಕಾರಣ ಪಂತ್ ಮೇಲೆ ಭಾರೀ ಒತ್ತಡ ನಿರ್ಮಾಣವಾಗಿದೆ.
ಫ್ರಾಂಚೈಸಿ ಕ್ರಿಕೆಟ್ ವಲಯದಲ್ಲಿ ಪಂತ್‌ಗೆ ನಾಯಕತ್ವ ಸೂಕ್ತವಾಗುವುದಿಲ್ಲ ಎಂಬ ಅಭಿಪ್ರಾಯ ಬಹಳ ಹಿಂದಿನಿಂದಲೂ ಇದೆ ಎನ್ನಲಾಗಿದೆ. ಈ ಸೀಸನ್‌ನಲ್ಲಿ ಪಂತ್ 11 ಪಂದ್ಯಗಳಲ್ಲಿ ಕೇವಲ 251 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ 138 ಮಾತ್ರ. ಆಧುನಿಕ T20 ಕ್ರಿಕೆಟ್ ಮಾನದಂಡಗಳಿಗೆ ಇದು ಸಾಕಷ್ಟು ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೊಮ್ಮೆ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದ ಪಂತ್ ಈ ಬಾರಿ ಕೇವಲ 9 ಸಿಕ್ಸರ್‌ಗಳನ್ನು ಮಾತ್ರ ಸಿಡಿಸಿದ್ದಾರೆ. ಬ್ಯಾಟಿಂಗ್ ಕ್ರಮದಲ್ಲಿ ಹಲವು ಬದಲಾವಣೆ ಮಾಡಿದರೂ ಅವರ ಆತ್ಮವಿಶ್ವಾಸ ವಾಪಾಸ್ ಆಗಿಲ್ಲ. ನಾಯಕರಾಗಿ ತಂಡದ ಆಯ್ಕೆ ತಂತ್ರಗಳ ಮೇಲೂ ಪ್ರಶ್ನೆಗಳು ಎದ್ದಿವೆ.
ಅರ್ಶಿನ್ ಕುಲಕರ್ಣಿ ಅವರನ್ನು ಓಪನರ್ ಆಗಿ ಬಳಸಿದ ನಿರ್ಧಾರ, ಹಿಮ್ಮತ್ ಸಿಂಗ್ ಹಾಗೂ ಆಯುಶ್ ಬದೋನಿ ಅವರಿಗೆ ನಿರಂತರ ಅವಕಾಶ ನೀಡಿದ ವಿಚಾರಗಳು ಟೀಕೆಗೆ ಗುರಿಯಾಗಿವೆ. ತಂಡದ ಮಾಲೀಕ ಸಂಜೀವ್ ಗೋಯೆಂಕಾ ಉತ್ತಮ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ನೀಡುವ ವ್ಯಕ್ತಿಯಾಗಿರುವುದರಿಂದ, ಪಂತ್ ನಾಯಕತ್ವ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎನ್ನಲಾಗುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ಮಾತ್ರವಲ್ಲದೇ ಅಕ್ಸರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹಾಲಿ ಟೂರ್ನಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿದೆ. ಡೆಲ್ಲಿ ತಂಡ ಎದ್ದಿದ್ದಕ್ಕಿಂತ ಬಿದ್ದಿದ್ದೇ ಹೆಚ್ಚು ಎನ್ನಬಹುದು. ಅಕ್ಸರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರಾಶೆ ಮೂಡಿಸಿದೆ. ಅಕ್ಷರ್ ಈ ಸೀಸನ್‌ನಲ್ಲಿ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 100 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ 112.50 ಮಾತ್ರ.
ಅದರಲ್ಲಿ 56 ರನ್ ಒಂದೇ ಇನ್ನಿಂಗ್ಸ್‌ನಲ್ಲಿ ಬಂದಿದ್ದು, ಉಳಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಅವರ ಒಟ್ಟು ರನ್ ಗಳಿಕೆ ಕೇವಲ 44 ರನ್ ಮಾತ್ರ. ಬ್ಯಾಟಿಂಗ್ ಹೋಗಲಿ ಬೌಲಿಂಗ್‌ನಲ್ಲಾದರೂ ಅವರ ಪ್ರದರ್ಶನ ಉತ್ತಮವಾಗಿದೆಯೇ ಎಂದು ನೋಡಿದರೆ ಅದೂ ಇಲ್ಲ. ಅವರು 12 ಪಂದ್ಯಗಳಲ್ಲಿ ಕೇವಲ 36 ಓವರ್‌ಗಳನ್ನು ಎಸೆದು 10 ವಿಕೆಟ್ ಪಡೆದಿದ್ದಾರೆ. ಓರ್ವ ತಜ್ಞ ಸ್ಪಿನ್ನರ್ ಆಗಿ ತಾವು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಮಾಡದಿರುವುದು ಕೂಡ ಇದೀಗ ಟೀಕೆಗೆ ಕಾರಣವಾಗಿದೆ.
ಮುಂದಿನ ಸೀಸನ್‌ನಲ್ಲಿ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ಹೊಣೆ JSW ಗುಂಪಿನ ಕೈಗೆ ಹೋಗಲಿದ್ದು, ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚಾಗಿದೆ. ಮಾತ್ರವಲ್ಲದೇ ತಂಡದ ಆಯ್ಕೆ ತಂತ್ರಗಳೂ ಪ್ರಶ್ನೆಗೆ ಒಳಗಾಗಿವೆ. ಪ್ರತಿಭಾವಂತ ಆಟಗಾರ ಅಭಿಷೇಕ್ ಪೊರೆಲ್ ಅವರನ್ನು ಸರಿಯಾಗಿ ಬಳಸದೇ ಇರುವುದು, ಮಾಧವ್ ತಿವಾರಿ ಅವರಿಗೆ ನಿರಂತರ ಅವಕಾಶ ನೀಡದಿರುವುದು ಹಾಗೂ ಯುವ ಆಟಗಾರ ಸಾಹಿಲ್ ಪರಾಖ್ ಮೇಲೆ ಅತಿಯಾದ ನಿರೀಕ್ಷೆ ಇಟ್ಟಿರುವುದು ಟೀಕೆಗೆ ಗುರಿಯಾಗಿದೆ.
ಕೋಲ್ಕತಾ ನೈಟ್ ರೈಡರ್ಸ್
ಕೋಲ್ಕತಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಟ್ಟು ಅಕ್ಷರಶಃ ನಟ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡ ತೀವ್ರ ಹಿನ್ನಡೆ ಅನುಭವಿಸಿದೆ.
ಅನುಭವಿ ಆಟಗಾರ ಅಜಿಂಕ್ಯ ರಹಾನೆ ಅವರನ್ನು ನಾಯಕರನ್ನಾಗಿ ಮಾಡಿದ್ದ ಕೆಕೆಆರ್ ಫ್ರಾಂಚೈಸಿ ನಿರ್ಧಾರ ಕೂಡ ಅಷ್ಟೇನೂ ಫಲ ನೀಡಿಲ್ಲ. ರಹಾನೆ ಅವರನ್ನು ಕೆಕೆಆರ್ ತಂಡದ ನಾಯಕನಾಗಿ ಆಯ್ಕೆ ಮಾಡಿದ್ದು “ಬೇರೆ ಆಯ್ಕೆ ಇರಲಿಲ್ಲ” ಎಂಬ ಪರಿಸ್ಥಿತಿಯಲ್ಲಿ ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ವರದಿ ಹೇಳಿದೆ.
37 ವರ್ಷದ ರಹಾನೆ ಈ ಸೀಸನ್‌ನಲ್ಲಿ 237 ರನ್ ಗಳಿಸಿದ್ದು, ಅವರ ಸ್ಟ್ರೈಕ್ ರೇಟ್ 133 ಮಾತ್ರ. ಟಾಪ್ ಆರ್ಡರ್‌ನಲ್ಲಿ ಆಡಿದರೂ ವೇಗವಾಗಿ ರನ್ ಗಳಿಸಲು ವಿಫಲವಾದ ಕಾರಣ ತಂಡದ ರನ್‌ರೇಟ್ ಮೇಲೆ ಪರಿಣಾಮ ಬೀರಿದೆ.
ಯುವ ಆಟಗಾರ ಆಂಗ್ರಿಶ್ ರಘುವಂಶಿ ಜೊತೆಗೆ ರಹಾನೆ ಟಾಪ್ ಆರ್ಡರ್‌ನಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಪರಿಣಾಮ KKR ಅನೇಕ ಪಂದ್ಯಗಳಲ್ಲಿ ಆರಂಭಿಕ ವೇಗ ಕಳೆದುಕೊಂಡಿತು. 11 ಪಂದ್ಯಗಳಲ್ಲಿ ಈ ಜೋಡಿ ಒಟ್ಟಿಗೆ ಕೇವಲ 25 ಸಿಕ್ಸರ್‌ಗಳನ್ನು ಮಾತ್ರ ಬಾರಿಸಿದೆ. ಆಧುನಿಕ T20 ಕ್ರಿಕೆಟ್‌ನ ವೇಗಕ್ಕೆ ರಹಾನೆ ಹೊಂದಿಕೊಳ್ಳಲಾಗುತ್ತಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.
ಜಾಗತಿಕ ಕ್ರಿಕೆಟ್ ವಲಯದಲ್ಲಿ, ಅಕ್ಷರ್ ಪಟೇಲ್ ಮತ್ತು ರಿಷಭ್ ಪಂತ್ ಮುಂದೆಯೂ ಆಟಗಾರರಾಗಿ ಬೇಡಿಕೆಯಲ್ಲಿರಬಹುದು. ಆದರೆ ಅಜಿಂಕ್ಯಾ ರಹಾನೆ ಅವರನ್ನು ಮುಂದಿನ ಮಿನಿ ಹರಾಜಿನಲ್ಲಿ ಬೇರೆ ಫ್ರಾಂಚೈಸಿಗಳು ಪರಿಗಣಿಸುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ.
ಈಗ IPL ಸೀಸನ್ ಅಂತ್ಯಕ್ಕೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಈ ಮೂವರು ನಾಯಕರ ಭವಿಷ್ಯದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.