ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ತಮ್ಮ ತಂಡದ ಆಟಗಾರರನ್ನು ಟೀಕಿಸಿದ್ದಾರೆ.
ರಾಜಸ್ಥಾನಕ್ಕೆ ಇದು ಕಳೆದ 5 ಪಂದ್ಯಗಳಲ್ಲಿ 4 ನೇ ಸೋಲಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ತಲುಪುವಲ್ಲಿ ಅವಕಾಶ ಕಳೆದುಕೊಳ್ಳುವಂತಾಯಿತು.
ತಂಡದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಬಗ್ಗೆ ಕುರಿತು ಮಾತನಾಡಿದ ರಿಯಾನ್, ತಮ್ಮ ಆಟಗಾರರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗೆಯೇ ಅವರು ಆಟ ಮುಂದುವರೆಸಿದರೆ, ಅಗ್ರ ನಾಲ್ಕು ತಂಡಗಳ ಸ್ಥಾನದಲ್ಲಿ ಉಳಿಯಲು ಹೇಗೆ ಸಾಧ್ಯ ಎಂದರು.
ದೆಹಲಿ ವಿರುದ್ಧದ ಸೋಲಿನಿಂದಾಗಿ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಲು ಇನ್ನೂ ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ. RR ಪ್ರಸ್ತುತ ಆರು ಗೆಲುವುಗಳು ಮತ್ತು ಆರು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ನಿರೂಪಕ ಹರ್ಷ ಭೋಗ್ಲೆ ಪ್ರಶ್ನೆಗೆ ಉತ್ತರಿಸಿದ ರಿಯಾನ್, 14 ಓವರ್‌ಗಳ ನಂತರವೂ ನಾವು ಉತ್ತಮ ಸ್ಥಿತಿಯಲ್ಲಿದ್ದೇವು. ನಾನು ಔಟಾದ ನಂತರ ಇತರ ಆಟಗಾರರನ್ನು ಅದನ್ನು ಉಳಿಸಿಕೊಳ್ಳಲಾಗಲಿಲ್ಲ. 220-230 ಆಗಬೇಕಿತ್ತು. ಅದು ಆಗಲಿಲ್ಲ. ಬೌಲಿಂಗ್ ಚೆನ್ನಾಗಿರಲಿಲ್ಲ. ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ಟ್ರೋಫಿ ಗೆಲ್ಲಲು ಬಯಸಿದರೆ, ಪ್ರತಿ ವರ್ಷ ಸ್ಪರ್ಧಿಸಲು ಬಯಸಿದರೆ ಈ ರೀತಿ ಆಟ ಆಡಿದರೆ ಆಗಲ್ಲ. ಸೋಲಿನಿಂದ ತುಂಬಾ ನಿರಾಶೆಗೊಂಡಿದ್ದೇನೆ ಅವರು ಹೇಳಿದರು.
ರಾಜಸ್ತಾನ ನೀಡಿದ್ದ 194 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು. ಡೆಲ್ಲಿ ಪರ ಆರಂಭಿಕರಾದ ಅಭಿಷೇಕ್ ಪೊರೆಲ್ (51) ಮತ್ತು ಕೆಎಲ್ ರಾಹುಲ್ (56) ಅಮೋಘ ಜೊತೆಯಾಟ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 105 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಬಳಿಕ ಕ್ರೀಸ್ ಗೆ ಬಂದ ಅಕ್ಸರ್ ಪಟೇಲ್ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.