ರಷ್ಯಾದಿಂದಲೇ ತೈಲ ತಂದು, ರಷ್ಯಾಕ್ಕೇ ಪೆಟ್ರೋಲ್ ಮಾರಾಟ...? ಏನಿದು ಭಾರತದ ರಿಫೈನರಿಗಳ ‘ಉಲ್ಟಾ’ ಗೇಮ್? ಕೇಂದ್ರ ಸರ್ಕಾರ ಹೇಳಿದ್ದೇನು..?

ಸುಮಾರು 60,000 ಮೆಟ್ರಿಕ್ ಟನ್ ಪೆಟ್ರೋಲ್ ಈಗಾಗಲೇ ರವಾನೆಯಾಗಿದ್ದು, ಇನ್ನೂ ಎರಡು ಟ್ಯಾಂಕರ್‌ಗಳಲ್ಲಿ ತಲಾ 30,000–40,000 ಟನ್ ಪೆಟ್ರೋಲ್ ಕಳುಹಿಸಲಾಗಿದೆ ಎಂಬ ಮಾಹಿತಿಯೂ ವರದಿಯಾಗಿತ್ತು.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಭಾರತ, ಅದನ್ನೇ ಸಂಸ್ಕರಿಸಿ ಮತ್ತೆ ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿದೆ ಎಂಬ ವರದಿಗಳು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿವೆ.

ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, "ರಷ್ಯಾದಿಂದ ತೈಲ ತಂದು ಮತ್ತೆ ರಷ್ಯಾಕ್ಕೇ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆಯೇ?" ಎಂಬ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಭಾರತದ ಯಾವುದೇ ಸರ್ಕಾರಿ ಅಥವಾ ಖಾಸಗಿ ತೈಲ ಸಂಸ್ಕರಣಾ ಕಂಪನಿಗಳು (ರಿಫೈನರಿಗಳು) ನೇರವಾಗಿ ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ವರದಿಗಳು ಬಂದಿದ್ದು ಹೇಗೆ?

ಇತ್ತೀಚಿನ ಕೆಲವು ಅಂತರರಾಷ್ಟ್ರೀಯ ಮಾಧ್ಯಮ ವರದಿಗಳಲ್ಲಿ, ಉಕ್ರೇನ್ ದಾಳಿಯಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಹಾನಿಯಾಗಿದ್ದರಿಂದ ದೇಶೀಯ ಬೇಡಿಕೆ ಪೂರೈಸಲು ಭಾರತದಿಂದ ಸಮುದ್ರ ಮಾರ್ಗದ ಮೂಲಕ ಪೆಟ್ರೋಲ್ ಖರೀದಿಸಲಾಗಿದೆ ಎಂದು ಹೇಳಲಾಗಿತ್ತು.

ಸುಮಾರು 60,000 ಮೆಟ್ರಿಕ್ ಟನ್ ಪೆಟ್ರೋಲ್ ಈಗಾಗಲೇ ರವಾನೆಯಾಗಿದ್ದು, ಇನ್ನೂ ಎರಡು ಟ್ಯಾಂಕರ್‌ಗಳಲ್ಲಿ ತಲಾ 30,000–40,000 ಟನ್ ಪೆಟ್ರೋಲ್ ಕಳುಹಿಸಲಾಗಿದೆ ಎಂಬ ಮಾಹಿತಿಯೂ ವರದಿಯಾಗಿತ್ತು.

File photo
Watch | ರಷ್ಯಾ ತೈಲ ಖರೀದಿ ಸಮರ್ಥಿಸಿ, ಯುರೋಪ್ ದ್ವಿಮುಖ ನೀತಿಗೆ ಜೈಶಂಕರ್ ತಪರಾಕಿ!

ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?

ಈ ವರದಿಗಳ ಕುರಿತು ಪ್ರತಿಕ್ರಿಯಿಸಿದ ಹರ್ದೀಪ್ ಸಿಂಗ್ ಪುರಿ, "ಭಾರತದ ಯಾವುದೇ ರಿಫೈನರಿ ರಷ್ಯಾಕ್ಕೆ ನೇರವಾಗಿ ಪೆಟ್ರೋಲ್ ರಫ್ತು ಮಾಡುತ್ತಿಲ್ಲ. ಭಾರತೀಯ ಮೂಲದ ಇಂಧನ ರಷ್ಯಾಕ್ಕೆ ತಲುಪಿದ್ದರೆ, ಅದು ಮಧ್ಯವರ್ತಿಗಳ ಮೂಲಕ ಹಲವು ಬಾರಿ ಖರೀದಿ-ಮಾರಾಟವಾದ ಬಳಿಕ ಅಂತಿಮವಾಗಿ ಅಲ್ಲಿಗೆ ಹೋಗಿರಬಹುದು" ಎಂದು ಹೇಳಿದ್ದಾರೆ.

ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಮಧ್ಯವರ್ತಿಗಳ ಮೂಲಕ ವ್ಯಾಪಾರವಾಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಹೀಗಾಗಿ ಉತ್ಪನ್ನದ ಮೂಲ ದೇಶ ಮತ್ತು ಅಂತಿಮವಾಗಿ ಖರೀದಿಸುವ ದೇಶದ ನಡುವೆ ನೇರ ವ್ಯವಹಾರ ಇರಲೇಬೇಕೆಂದಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗುವ ಸಾಧ್ಯತೆ ಕುರಿತು ಮಾತನಾಡಿರುವ ಅವರು, ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಇದೇ ಮಟ್ಟದಲ್ಲಿ ಮುಂದಿನ ಕೆಲವು ತಿಂಗಳುಗಳವರೆಗೆ ಸ್ಥಿರವಾಗಿದ್ದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಬಗ್ಗೆ ಸರ್ಕಾರ ಹಾಗೂ ತೈಲ ಕಂಪನಿಗಳು ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದಾರೆ.

ಭಾರತ ಇಂದು ವಿಶ್ವದ ಪ್ರಮುಖ ತೈಲ ಸಂಸ್ಕರಣಾ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ರಿಫೈನರಿಗಳಲ್ಲಿ ಸಂಸ್ಕರಿಸಲಾದ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ATF) ಸೇರಿದಂತೆ ವಿವಿಧ ಪೆಟ್ರೋಲಿಯಂ ಉತ್ಪನ್ನಗಳನ್ನು 140ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com