'ಇರಾನ್ ಸಂಪೂರ್ಣ ಮಣಿದಿದೆ', 'ನಮಗೆ ಬೇಕಿದ್ದ ಬಹುತೇಕ ಎಲ್ಲ ಷರತ್ತುಗಳಿಗೆ ಒಪ್ಪಿದೆ': ಟ್ರಂಪ್‌ ಮಹತ್ವದ ಹೇಳಿಕೆ

ಅಮೆರಿಕದ ಸೇನಾ ಕಾರ್ಯಾಚರಣೆಗಳಿಂದ ಇರಾನ್‌ನ ಸೇನಾ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ. "ಅವರ ನೌಕಾಪಡೆ, ವಾಯುಪಡೆ, ರಾಡಾರ್ ವ್ಯವಸ್ಥೆ ಬಹುತೇಕ ನಾಶವಾಗಿದೆ. ಹಲವು ಪ್ರಮುಖ ನಾಯಕರು ಮತ್ತು ಸೇನಾ ಕಮಾಂಡರ್‌ಗಳು ಮೃತಪಟ್ಟಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್ online desk
Updated on

ವಾಷಿಂಗ್ಟನ್: ಇರಾನ್‌ನೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಯಲ್ಲಿ ಅಮೆರಿಕ ಮುಂದಿಟ್ಟಿದ್ದ ಬಹುತೇಕ ಎಲ್ಲ ಷರತ್ತುಗಳಿಗೂ ತೆಹ್ರಾನ್ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದದಂತೆ ತಡೆಯುವುದೇ ಈ ಮಾತುಕತೆಯ ಪ್ರಮುಖ ಉದ್ದೇಶ ಎಂದು ಅವರು ಪುನರುಚ್ಚರಿಸಿದ್ದಾರೆ.

ಸಿಎನ್‌ಬಿಸಿ (CNBC)ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ನಮಗೆ ಬೇಕಿದ್ದ ಬಹುತೇಕ ಎಲ್ಲ ಷರತ್ತುಗಳಿಗೆ ಅವರು ಒಪ್ಪಿದ್ದಾರೆ. ಅಂತಿಮ ಒಪ್ಪಂದದ ಹಂತಕ್ಕೆ ನಾವು ತಲುಪುತ್ತಿದ್ದೇವೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ಇದೇ ವೇಳೆ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೇ ಅಮೆರಿಕದ ಗುರಿಯಾಗಿದೆ ಎಂದೂ ತಿಳಿಸಿದ್ದಾರೆ.

"ಇದು ಸಾಂಪ್ರದಾಯಿಕ ಯುದ್ಧವಲ್ಲ. ಇದು ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುವ ಕಾರ್ಯಾಚರಣೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಸೇನಾ ಕಾರ್ಯಾಚರಣೆಗಳಿಂದ ಇರಾನ್‌ನ ಸೇನಾ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ. "ಅವರ ನೌಕಾಪಡೆ, ವಾಯುಪಡೆ, ರಾಡಾರ್ ವ್ಯವಸ್ಥೆ ಬಹುತೇಕ ನಾಶವಾಗಿದೆ. ಹಲವು ಪ್ರಮುಖ ನಾಯಕರು ಮತ್ತು ಸೇನಾ ಕಮಾಂಡರ್‌ಗಳು ಮೃತಪಟ್ಟಿದ್ದಾರೆ. ಹೊಸ ನಾಯಕರನ್ನು ನೇಮಿಸಿದರೂ ಅವರೂ ಸಾವನ್ನಪ್ಪಿದ್ದಾರೆ. ಈಗ ಮೂರನೇ ಹಂತದ ನಾಯಕತ್ವದೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.

Donald Trump
ಜುಲೈ 4ರಿಂದ ಅಲಿ ಖಮೇನಿ ಅಂತಿಮ ವಿಧಿವಿಧಾನ: ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ, ಭದ್ರತಾ ಕಾರಣಕ್ಕೆ ಪುತ್ರ ಮೊಜ್ತಬಾ ಗೈರು..!

ಇರಾನ್ ವಿರುದ್ಧ ಅಮೆರಿಕ ಸಂಪೂರ್ಣ ಸೇನಾ ವಿಜಯ ಸಾಧಿಸಿದೆ. "ಇರಾನ್ ಬಳಿ ಉಳಿದಿರುವ ಕೆಲ ಕ್ಷಿಪಣಿಗಳನ್ನೂ ನಾವು ಬೇಕಾದರೆ ನಾಶಪಡಿಸಬಹುದು. ಕಳೆದ ವಾರ ಮಾತ್ರ ಮೂರು ಬಾರಿ ಭಾರೀ ದಾಳಿ ನಡೆಸಿದ್ದೇವೆ. ಅದಕ್ಕೂ ಮುನ್ನದ ವಾರ ಎರಡು ಬಾರಿ ದಾಳಿ ನಡೆಸಿದ್ದೇವೆ. ಆದರೂ ಮಾತುಕತೆ ಮುಂದುವರಿದಿದೆ. ಅವರು ನಮ್ಮ ಬಹುತೇಕ ಎಲ್ಲ ಷರತ್ತುಗಳನ್ನು ಒಪ್ಪಿದ್ದಾರೆ.

ಮಾತುಕತೆಯಲ್ಲಿ ಅಮೆರಿಕ ಬಲಿಷ್ಠ ಸ್ಥಿತಿಯಲ್ಲಿದೆ. "ಈಗ ಎಲ್ಲಾ ಮೇಲುಗೈ ನಮ್ಮ ಕೈಯಲ್ಲಿದೆ. ಅಂತಿಮ ನಿರ್ಧಾರಕ್ಕಾಗಿ ಅವರು ಕಾಯುತ್ತಿದ್ದಾರೆ. ಯುದ್ಧದಿಂದ ಇರಾನ್‌ನ ಆರ್ಥಿಕತೆ ಗಂಭೀರ ಹಿನ್ನಡೆ ಅನುಭವಿಸಿದೆ.

"ಇರಾನ್‌ನಲ್ಲಿ ಹಣದುಬ್ಬರ 300 ಶೇಕಡಿಗೆ ಏರಿದೆ. ಅವರಿಗೆ ಆಹಾರ ಧಾನ್ಯಗಳ ಅಗತ್ಯವಿದೆ. ಅಂತಿಮ ಒಪ್ಪಂದವಾದರೆ ಅಮೆರಿಕದ ರೈತರಿಂದಲೇ ಜೋಳ, ಗೋಧಿ ಹಾಗೂ ಸೋಯಾಬೀನ್ ಪೂರೈಕೆ ಮಾಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದರು.

ಇದೇ ವೇಳೆ ಅಮೆರಿಕದ ನೌಕಾಪಡೆಯ ಕಾರ್ಯಾಚರಣೆಯನ್ನು ಶ್ಲಾಘಿಸಿದ ಟ್ರಂಪ್, "ನಮ್ಮ ನೌಕಾಪಡೆ ವಿಶ್ವದಲ್ಲೇ ಅತ್ಯುತ್ತಮ. ಇರಾನ್‌ಗೆ ಯಾವುದೇ ಹಡಗು ಸುರಕ್ಷಿತವಾಗಿ ತಲುಪದಂತೆ ಅವರು ಕಾರ್ಯನಿರ್ವಹಿಸಿದ್ದಾರೆ" ಎಂದು ಹೇಳಿದರು.

ಬಳಿಕ ಕೆಲವು ಅಮೆರಿಕದ ಮಾಧ್ಯಮಗಳು "ಯುದ್ಧದ ನಂತರವೂ ಇರಾನ್ ಹಿಂದಿಗಿಂತ ಉತ್ತಮ ಸ್ಥಿತಿಯಲ್ಲಿದೆ" ಎಂದು ವರದಿ ಮಾಡಿರುವುದನ್ನು ಟ್ರಂಪ್ ಟೀಕಿಸಿದರು.

"ಅವರ ಸೇನಾ ಶಕ್ತಿ ಕುಸಿದಿದೆ, ನಾಯಕರು ಸಾವನ್ನಪ್ಪಿದ್ದಾರೆ, ಹಣದುಬ್ಬರ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲೂ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎನ್ನುವುದು ವಾಸ್ತವಕ್ಕೆ ದೂರವಾದ ವರದಿ" ಎಂದು ಹೇಳಿದರು.

ಈ ನಡುವೆ ಕತಾರ್‌ನ ರಾಜಧಾನಿ ದೋಹಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಪರೋಕ್ಷ ಮಾತುಕತೆ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ತಕ್ಷಣದ ಶಾಂತಿ ಒಪ್ಪಂದದ ಬಗ್ಗೆ ಯಾವುದೇ ಮಹತ್ವದ ಪ್ರಗತಿ ಕಂಡುಬಂದಿಲ್ಲ ಎಂದು ವರದಿಯಾಗಿದೆ.

ಕತಾರ್ ವಿದೇಶಾಂಗ ಸಚಿವಾಲಯದ ಪ್ರಕಾರ, ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿವಿಧಾನಗಳು ಜುಲೈ 9ರಂದು ಪೂರ್ಣಗೊಳ್ಳುವವರೆಗೆ ಮುಂದಿನ ಸುತ್ತಿನ ಮಾತುಕತೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಪ್ರತಿಕ್ರಿಯಿಸಿ, ಇರಾನ್‌ನ ಪರಮಾಣು ಕಾರ್ಯಕ್ರಮವೇ ಮಾತುಕತೆಯ ಪ್ರಮುಖ ಅಂಶವಾಗಿದ್ದು, ಮುಂದಿನ ಹಂತಗಳಲ್ಲಿ ಅದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com