ಸಿಡ್ನಿ: 2018ರಲ್ಲಿ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಸ್ಯಾಂಡ್‌ಪೇಪರ್ ಗೇಟ್ ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿರಲಿಲ್ಲ ಎಂದು ಆಸಿಸ್ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಈ ಪ್ರಕರಣದ ಕುರಿತು ಇತ್ತೀಚೆಗೆ ಉಸ್ಮಾನ್ ಖವಾಜಾ ನೀಡಿದ್ದ ಹೇಳಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಖವಾಜಾ ಹೇಳಿರುವುದು 'ಶೇ.100ರಷ್ಟು ಸತ್ಯ' ಎಂದು ಹೇಳಿರುವ ವಾರ್ನರ್, ಅಂದಿನ ತನಿಖೆಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ವಾರ್ನರ್, ಎಂಟು ವರ್ಷಗಳ ಬಳಿಕ ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುವುದನ್ನು ಪ್ರಶ್ನಿಸುವ ಬದಲು, ಖವಾಜಾ ಎತ್ತಿರುವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
8 ವರ್ಷಗಳ ಹಳೆಯ ಪ್ರಕರಣ
'ಈ ವಿಚಾರದ ಬಗ್ಗೆ ನಾನು ಮಾತನಾಡಿ ಎಂಟು ವರ್ಷಗಳಾಗಿವೆ. ಉಸ್ಮಾನ್ ಖವಾಜಾ, ನಿನಗೆ ನನ್ನ ಸಂಪೂರ್ಣ ಬೆಂಬಲವಿದೆ. ನೀನು ಮಾಡಿರುವುದಕ್ಕೆ ಧನ್ಯವಾದಗಳು. ನೀನು ಹೇಳಿರುವುದು ಶೇ.100ರಷ್ಟು ಸತ್ಯ.
ಈಗ ಎಲ್ಲರಿಗೂ ಸತ್ಯ ಗೊತ್ತಾಗಿದೆ. ಜನರು ತಿಳಿದುಕೊಳ್ಳಲು ಬಯಸಿದ್ದನ್ನು ನೀನು ಹೇಳಿದ್ದೀಯ. ಆದರೆ, ಈಗ ಎಂಟು ವರ್ಷಗಳ ಬಳಿಕ ಯಾಕೆ ಈ ವಿಚಾರ ಪ್ರಸ್ತಾಪಿಸುತ್ತಿದ್ದೀಯ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಪುಸ್ತಕ ಮಾರಾಟಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದೂ ಹೇಳುತ್ತಿದ್ದಾರೆ. ಇದು ಉಸ್ಮಾನ್ ಅವರ ಕಥೆ, ಅವರ ನಂಬಿಕೆ ಮತ್ತು ಅನುಭವ' ಎಂದು ವಾರ್ನರ್ ಹೇಳಿದ್ದಾರೆ.
ತನಿಖೆಯ ಬಗ್ಗೆಯೂ ವಾರ್ನರ್ ಪ್ರಶ್ನೆ
2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ತನಿಖೆ ತರಾತುರಿಯಲ್ಲಿ ಮತ್ತು ಸರಿಯಾಗಿ ನಡೆಯಲಿಲ್ಲ ಎಂದು ವಾರ್ನರ್ ಆರೋಪಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಪಕ್ಕದಲ್ಲೇ ಉಸ್ಮಾನ್ ಖವಾಜಾ ಕುಳಿತಿದ್ದರೂ, ತನಿಖಾಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ ಎಂದು ಹೇಳಿದ್ದಾರೆ.
'ಇಡೀ ವಿಚಾರಣೆ ಪ್ರಕ್ರಿಯೆ ಅವಸರದಲ್ಲಿ ನಡೆದಿತ್ತು. ಅದರಲ್ಲಿ ಹಲವು ಲೋಪಗಳಿದ್ದವು. ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪಕ್ಕದಲ್ಲೇ ಉಸ್ಮಾನ್ ಕುಳಿತಿದ್ದರು. ಆದರೆ, ಅವರನ್ನು ವಿಚಾರಣೆ ಮಾಡಲೇ ಇಲ್ಲ. ಇದನ್ನು ಸಮಗ್ರ ತನಿಖೆ ಎಂದು ಹೇಗೆ ಕರೆಯಲು ಸಾಧ್ಯ? ಸತ್ಯವನ್ನು ಸರಿಯಾಗಿ ಪರಿಶೀಲಿಸುವುದು, ಹೊಣೆಗಾರಿಕೆ ಮತ್ತು ಪಾರದರ್ಶಕತೆ ಖಚಿತಪಡಿಸುವುದು ನಮ್ಮ ಉದ್ದೇಶ. ಹೊಣೆಗಾರಿಕೆ ಕೇಳುತ್ತಿರುವ ವ್ಯಕ್ತಿಯನ್ನು ಪ್ರಶ್ನಿಸುವ ಬದಲು, ತನಿಖೆ ನಡೆಸಿದವರನ್ನೇ ಉತ್ತರ ಕೇಳುವ ಸಮಯ ಬಂದಿದೆ' ಎಂದು ವಾರ್ನರ್ ಹೇಳಿದ್ದಾರೆ.
ಯಾರನ್ನೂ ದೂಷಿಸುವುದು ಅಥವಾ ಹಳೆಯ ಗಾಯಗಳನ್ನು ಮತ್ತೆ ಕೆದಕುವುದು ತಮ್ಮ ಉದ್ದೇಶವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮಕ್ಕಳಿಗೆ ಸತ್ಯ ಹೇಳಬೇಕಾಯಿತು ಎಂದ ವಾರ್ನರ್
ಈ ವಿವಾದ ತಮ್ಮ ಕುಟುಂಬದ ಮೇಲೂ ತೀವ್ರ ಪರಿಣಾಮ ಬೀರಿತ್ತು ಎಂದು ವಾರ್ನರ್ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಹೆಣ್ಣುಮಕ್ಕಳು ಈ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದ್ದರಿಂದ, ಅವರಿಗೆ ನಡೆದ ಘಟನೆಯನ್ನು ವಿವರಿಸಬೇಕಾಯಿತು ಎಂದು ಹೇಳಿದ್ದಾರೆ.
'ಕಳೆದ ಎಂಟು ವರ್ಷಗಳಲ್ಲಿ ಮಾಧ್ಯಮಗಳಲ್ಲಿ ಹಲವು ಹೇಳಿಕೆಗಳು ಮತ್ತು ತಪ್ಪು ಮಾಹಿತಿಗಳು ಪ್ರಕಟವಾಗಿವೆ. ಅನೇಕರು ಮೌನವಾಗಿದ್ದರು. ಕಳೆದ ಕೆಲವು ದಿನಗಳಿಂದ ನನ್ನ ಹೆಣ್ಣುಮಕ್ಕಳೊಂದಿಗೆ ಈ ಬಗ್ಗೆ ಮಾತನಾಡಬೇಕಾಯಿತು. ಅದಕ್ಕಾಗಿಯೇ ನನ್ನ ಪ್ರತಿಕ್ರಿಯೆ ನೀಡಲು ಒಂದೆರಡು ದಿನ ತೆಗೆದುಕೊಂಡೆ. ವಿಶೇಷವಾಗಿ 12 ವರ್ಷದ ಮಗಳು ಐವಿ, ಆಗ ನಮ್ಮನ್ನು ಏಕೆ ಹಿಡಿದುಕೊಂಡಿದ್ದರು, ಅಲ್ಲಿ ಅಷ್ಟು ಕ್ಯಾಮೆರಾಗಳು ಏಕೆ ಇದ್ದವು, ನಾವು ಟಿವಿಯಲ್ಲಿ ಏಕೆ ಅಳುತ್ತಿದ್ದೆವು ಎಂದು ಪ್ರಶ್ನಿಸಿದಳು' ಎಂದು ವಾರ್ನರ್ ಹೇಳಿದ್ದಾರೆ.
ಮಕ್ಕಳಿಗೆ ಈ ಘಟನೆಯನ್ನು ವಿವರಿಸುವುದು ಕಷ್ಟವಾಗಿತ್ತು ಎಂದಿರುವ ಅವರು, 'ಹುಡುಗಿಯರೇ, ಯಾವಾಗಲೂ ಸತ್ಯವನ್ನೇ ಹೇಳಿ. ಏಕೆಂದರೆ ಸುಳ್ಳು ಒಂದು ದಿನ ಹೊರಬಂದೇ ಬರುತ್ತದೆ ಎಂದು ಅವರಿಗೆ ಹೇಳಿದೆ' ಎಂದಿದ್ದಾರೆ. ತಮ್ಮ ಕುಟುಂಬ ಮಾತ್ರವಲ್ಲದೆ, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಕುಟುಂಬಗಳೂ ಈ ವಿವಾದದಿಂದ ಸಂಕಷ್ಟ ಅನುಭವಿಸಿವೆ. ಹೀಗಾಗಿ ಖವಾಜಾ ಹೇಳಿರುವ ಸತ್ಯ ಹೊರಬರಬೇಕಿತ್ತು ಎಂದು ವಾರ್ನರ್ ಪುನರುಚ್ಚರಿಸಿದ್ದಾರೆ.
ಏನಿದು 2018ರ ಬಾಲ್ ಟ್ಯಾಂಪರಿಂಗ್ ವಿವಾದ?
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡಿನ ಸ್ವರೂಪ ಬದಲಿಸಲು ಮರಳು ಕಾಗದ ಬಳಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆ ಜಾಗತಿಕ ಕ್ರಿಕೆಟ್‌ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಆಗಿನ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಬ್ಯಾಂಕ್ರಾಫ್ಟ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ತನಿಖೆಯ ಬಳಿಕ ಸ್ಮಿತ್ ಮತ್ತು ವಾರ್ನರ್‌ಗೆ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಿಂದ 12 ತಿಂಗಳ ನಿಷೇಧ ವಿಧಿಸಲಾಗಿತ್ತು. ಬ್ಯಾಂಕ್ರಾಫ್ಟ್‌ಗೆ ಒಂಬತ್ತು ತಿಂಗಳ ನಿಷೇಧ ವಿಧಿಸಲಾಗಿತ್ತು.
ಇದುವರೆಗೆ ಈ ಮೂವರೇ ಪ್ರಕರಣಕ್ಕೆ ಹೊಣೆಗಾರರು ಎಂಬುದು ವ್ಯಾಪಕವಾಗಿ ಒಪ್ಪಿಕೊಂಡಿದ್ದ ವಿವರಣೆಯಾಗಿತ್ತು. ಇದೀಗ ಖವಾಜಾ ಅವರ ಹೇಳಿಕೆಗೆ ವಾರ್ನರ್ ಬೆಂಬಲ ನೀಡಿರುವುದು ಪ್ರಕರಣದ ತನಿಖೆ ಮತ್ತು ಹೊಣೆಗಾರಿಕೆಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.