ಹಾರ್ದಿಕ್ ಪಾಂಡ್ಯ - ಮೊಹಮ್ಮದ್ ಕೈಫ್ 
ಕ್ರಿಕೆಟ್

'ಜಿಟಿ ತೊರೆದಿದ್ದು ಹಾರ್ದಿಕ್ ಪಾಂಡ್ಯ ಮಾಡಿದ ದೊಡ್ಡ ತಪ್ಪು': ಪಂಜಾಬ್ ಕಿಂಗ್ಸ್ ಸೇರಿದ ಬಳಿಕ ಆಲ್‌ರೌಂಡರ್ ಬಗ್ಗೆ ಮೊಹಮ್ಮದ್ ಕೈಫ್

'ಅನೇಕ ಆಟಗಾರರು ನಾಯಕತ್ವವನ್ನು ಬಯಸುತ್ತಾರೆ. ಆದರೆ, ನಾಯಕತ್ವದ ಒತ್ತಡದಲ್ಲಿ ಅವರಲ್ಲಿ ಅನೇಕರು ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಾರೆ. ಇದು ಎಲ್ಲರಿಗೂ ಒಗ್ಗುವಂತಹ ಕೆಲಸವಲ್ಲ' ಎಂದರು.

ನವದೆಹಲಿ: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು 'ಗುಜರಾತ್ ಟೈಟಾನ್ಸ್' (GT) ತಂಡವನ್ನು ತೊರೆದಿದ್ದು ತಪ್ಪು ನಿರ್ಧಾರವಾಗಿತ್ತು. ಈಗ 'ಪಂಜಾಬ್ ಕಿಂಗ್ಸ್' (PBKS) ತಂಡದೊಂದಿಗೆ ತಮ್ಮ ಲಯವನ್ನು ಮರಳಿ ಪಡೆಯುವತ್ತ ಅವರು ಗಮನಹರಿಸಬೇಕು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ.

ಗುಜರಾತ್ ತಂಡದ ನಾಯಕರಾಗಿದ್ದಾಗ ಪಾಂಡ್ಯ ಅವರು ತಮ್ಮ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಶಸ್ತಿಯನ್ನು ಗೆದ್ದಿದ್ದರು. ಬಳಿಕ ಐದು ಬಾರಿ ಚಾಂಪಿಯನ್ ಆಗಿರುವ 'ಮುಂಬೈ ಇಂಡಿಯನ್ಸ್' (MI) ತಂಡ ಸೇರಿದ ನಂತರ ಕಳೆದೆರಡು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು.

ಇದೀಗ ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಬಹುನಿರೀಕ್ಷಿತ ಆಟಗಾರರ ಟ್ರೇಡ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂಬೈ ಇಂಡಿಯನ್ಸ್ ತಮ್ಮ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಟ್ಟಿದ್ದರೆ, ಎರಡು ಬಾರಿ ಫೈನಲ್ ತಲುಪಿರುವ ಪಂಜಾಬ್ ತಂಡವು, ಎಡಗೈ ವೇಗದ ಬೌಲರ್ ಅರ್ಶದೀಪ್ ಸಿಂಗ್ ಅವರನ್ನು ಮುಂಬೈ ತಂಡಕ್ಕೆ ನೀಡಿದೆ. ಹಾರ್ದಿಕ್ ಪಾಂಡ್ಯ ₹18 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ (ಇದು ಅವರ ಹಿಂದಿನ ₹16.35 ಕೋಟಿ ಸಂಭಾವನೆಗಿಂತ ಹೆಚ್ಚು). ಇತ್ತ, ಅರ್ಶದೀಪ್ ಸಿಂಗ್ ತಮ್ಮ ಹಿಂದಿನ ₹18 ಕೋಟಿ ಸಂಭಾವನೆಯೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೈಫ್, ಹಾರ್ದಿಕ್ ಪಾಂಡ್ಯ ಅವರು ತಮಗೆ ಸ್ಟಾರ್ ಸ್ಥಾನಮಾನ ನೀಡಿದ್ದ ಮತ್ತು ಆಳವಾದ ಬಾಂಧವ್ಯವಿದ್ದ ಮುಂಬೈ ಇಂಡಿಯನ್ಸ್‌ಗೆ (MI) ಮರಳಲು ತೆಗೆದುಕೊಂಡ ನಿರ್ಧಾರವು, ಅವರಿಗೆ ಹಾನಿಯುಂಟುಮಾಡಿತು. ಗುಜರಾತ್ ಟೈಟಾನ್ಸ್‌ನಲ್ಲಿ (GT) ಯಶಸ್ವಿ ನಾಯಕರಾಗಿ ಮತ್ತು ಹೆಚ್ಚು ಪರಿಪಕ್ವ ಕ್ರಿಕೆಟಿಗರಾಗಿ ಅವರು 'ರಾಜನ'ನಂತೆಯೇ ಮೆರೆದಿದ್ದರು ಎಂದರು.

'ಗುಜರಾತ್ ಟೈಟಾನ್ಸ್ ತೊರೆದಿದ್ದು ಹಾರ್ದಿಕ್ ಮಾಡಿದ ದೊಡ್ಡ ತಪ್ಪು. ಇದೊಂದು ಭಾವನಾತ್ಮಕ ನಿರ್ಧಾರವಾಗಿತ್ತು ಎಂದು ನಾನು ಭಾವಿಸುತ್ತೇನೆ. ಮುಂಬೈ ಇಂಡಿಯನ್ಸ್‌ನೊಂದಿಗಿನ ಹಳೆಯ ನಂಟೇ ಅವರನ್ನು ಮತ್ತೆ ಅಲ್ಲಿಗೆ ಸೆಳೆದಿರಬಹುದು. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ನೀವು ಗುಜರಾತ್ ಟೈಟಾನ್ಸ್‌ಗೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದೀರಿ ಮತ್ತು ಅಲ್ಲಿ 'ರಾಜ'ನಂತೆ ಇದ್ದಿರಿ. ಆದರೆ, ಆ ನಿರ್ಧಾರ ಅವರಿಗೆ ಮುಳುವಾಯಿತು. ಅವರ ಪ್ರದರ್ಶನ ಮತ್ತು ನಾಯಕತ್ವ ಎರಡರಲ್ಲೂ ಅವರು ಹಿನ್ನಡೆ ಅನುಭವಿಸಿದರು. ಮುಂಬೈ ಇಂಡಿಯನ್ಸ್‌ನಲ್ಲಿನ ಈ ಎರಡನೇ ಇನಿಂಗ್ಸ್ ಅನ್ನು ಆದಷ್ಟು ಬೇಗ ಮರೆತು, ಮುಂದೆ ಸಾಗುವುದು ಅವರಿಗೆ ಒಳ್ಳೆಯದು' ಎಂದು ಕೈಫ್ ಹೇಳಿದರು.

'ಅನೇಕ ಆಟಗಾರರು ನಾಯಕತ್ವವನ್ನು ಬಯಸುತ್ತಾರೆ. ಆದರೆ, ನಾಯಕತ್ವದ ಒತ್ತಡದಲ್ಲಿ ಅವರಲ್ಲಿ ಅನೇಕರು ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಾರೆ. ಇದು ಎಲ್ಲರಿಗೂ ಒಗ್ಗುವಂತಹ ಕೆಲಸವಲ್ಲ. ಅದರಲ್ಲೂ ಐಪಿಎಲ್ (IPL) ನಲ್ಲಿ ಇದು ಇನ್ನಷ್ಟು ಕಠಿಣವಾಗಿರುತ್ತದೆ. ಹಾರ್ದಿಕ್ ನಾಯಕರಲ್ಲದಿರುವುದು ಅವರಿಗೆ ಒಳ್ಳೆಯದೇ ಆಗಿದೆ. ಪಿಬಿಕೆಎಸ್ (PBKS) ತಂಡದಲ್ಲಿ ಅವರು ಬ್ಯಾಟರ್, ಬೌಲರ್ ಮತ್ತು 'ಫಿನಿಶರ್' ಆಗಿ ತಮ್ಮ ಲಯವನ್ನು ಮರಳಿ ಪಡೆಯುವತ್ತ ಗಮನಹರಿಸಬೇಕು. ಅವರೊಬ್ಬ ಶ್ರೇಷ್ಠ ಆಟಗಾರ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ, ಅವರು ನಾಯಕರಲ್ಲದಿರುವುದೇ ಒಳ್ಳೆಯದೇ; ಅವರು ತಮ್ಮ ಆಟದ ಮೇಲೆ ಗಮನ ಕೇಂದ್ರೀಕರಿಸಬಹುದು. ಒಬ್ಬ ಆಲ್‌ರೌಂಡರ್ ಆಗಿದ್ದುಕೊಂಡು ನಾಯಕನ ಜವಾಬ್ದಾರಿಯನ್ನು ನಿರ್ವಹಿಸುವುದು ಇನ್ನೂ ಹೆಚ್ಚು ಕಷ್ಟಕರ' ಎಂದು ಅವರು ಹೇಳಿದರು.

ಮುಂಬೈ ತಂಡದೊಂದಿಗೆ ಏಳು ಸೀಸನ್‌ಗಳನ್ನು ಕಳೆದ ನಂತರ, ಐಪಿಎಲ್ 2022ಕ್ಕೂ ಮೊದಲು ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ (GT) ಸೇರ್ಪಡೆಗೊಂಡರು. ನಾಯಕರಾಗಿ ತಂಡವನ್ನು ಮುನ್ನಡೆಸಿದ ಅವರು, ತಮ್ಮ ಚೊಚ್ಚಲ ಸೀಸನ್‌ನಲ್ಲೇ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವ ಮೂಲಕ ಗಮನಾರ್ಹ ಪ್ರಭಾವ ಬೀರಿದರು. 2023ರಲ್ಲೂ ಗುಜರಾತ್ ಟೈಟಾನ್ಸ್ ಫೈನಲ್ ತಲುಪಿತು. ನಂತರ, 2024ರಲ್ಲಿ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್‌ಗೆ (MI) ಮರಳಿ, ತಂಡದ ನಾಯಕತ್ವವನ್ನು ವಹಿಸಿಕೊಂಡರು.

ಇತ್ತ, ಅರ್ಶದೀಪ್ ಸಿಂಗ್ ಅವರು ಪಿಬಿಕೆಎಸ್ (PBKS) ತಂಡದೊಂದಿಗೆ ಎಂಟು ಸೀಸನ್‌ಗಳನ್ನು ಕಳೆದ ನಂತರ ಈಗ ಎಂಐ (MI) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. 2019ರಲ್ಲಿ ಇದೇ ಪಿಬಿಕೆಎಸ್ ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಅವರು, ಟೂರ್ನಿಯ ಪ್ರಮುಖ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ತಮ್ಮ ಛಾಪು ಮೂಡಿಸಿದ್ದರು. ಐಪಿಎಲ್‌ನಲ್ಲಿ ಆಡಿದ 96 ಪಂದ್ಯಗಳಲ್ಲಿ 111 ವಿಕೆಟ್‌ಗಳನ್ನು ಕಬಳಿಸಿರುವ ಅವರು, ಪಿಬಿಕೆಎಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ 'ವಿನಾಶಕಾರಿ' ಬೆದರಿಕೆ!

'₹7 ಕೋಟಿ ಕೊಡಿ, ಇಲ್ಲದಿದ್ದರೆ...': ಬಿಷ್ಣೋಯ್ ಗ್ಯಾಂಗ್‌ನಿಂದ ಅರವಿಂದ್ ಕೇಜ್ರಿವಾಲ್, ಅವರ ಮಗಳಿಗೆ ಕೊಲೆ ಬೆದರಿಕೆ!

'ಟಾಕ್ಸಿಕ್'​ ಹಸಿಬಿಸಿ ದೃಶ್ಯಗಳ ಟ್ರೋಲಿಂಗ್‌ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!

ದೀಪಾವಳಿ ಹಬ್ಬಕ್ಕೆ ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್‌ನಲ್ಲಿ ಕುರಾನ್‌ ಪದ್ಯ; ಬಾಲಿವುಡ್ ನಟಿಗೆ ಲೀಗಲ್ ನೋಟಿಸ್‌!

ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್‌ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್ ಎಂಗೇಜ್‌ಮೆಂಟ್; ಫೋಟೋ ಹಂಚಿಕೊಂಡ ಗರ್ಲ್​ಫ್ರೆಂಡ್!