ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯು ಬುಧವಾರ ಟೀಂ ಇಂಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಭಾರತೀಯ ಆಟಗಾರರ ಸಂಬಳಕ್ಕೆ ಕತ್ತರಿ ಹಾಕಿದೆ.
ನವೆಂಬರ್ 15 ರಂದು ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದಲ್ಲಿ, ನಿಧಾನಗತಿಯ ಓವರ್-ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಭಾರತ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 35 ರಷ್ಟು ದಂಡ ವಿಧಿಸಲಾಗಿದೆ.
ಐಸಿಸಿ(ICC) ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ನಿಗದಿತ ಸಮಯದ ವಿನಾಯಿತಿಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರವೂ, ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ನಿಗದಿತ ಗುರಿಗಿಂತ ಏಳು ಓವರ್ಗಳನ್ನು ಕಡಿಮೆ ಎಸೆದಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯದ ರೆಫರಿ ರಂಜನ್ ಮದುಗಲೆ ಅವರು ಭಾರೀ ಪ್ರಮಾಣದ ದಂಡವನ್ನು ವಿಧಿಸಿದ್ದಾರೆ.
ಐಸಿಸಿಯ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ನಿಧಾನಗತಿಯ ಓವರ್ ರೇಟ್ ಗೆ ದಂಡ ವಿಧಿಸಲಾಗುತ್ತದೆ. ನಿಗದಿತ ಸಮಯಕ್ಕಿಂತ ಕಡಿಮೆ ಉಳಿದ ಪ್ರತಿ ಓವರ್ಗೆ ಆಟಗಾರರ ಪಂದ್ಯ ಶುಲ್ಕದ ಶೇ. 5ರಷ್ಟು ದಂಡ ವಿಧಿಸುವ ನಿಯಮವಿದೆ. ಗರಿಷ್ಠ ದಂಡದ ಪ್ರಮಾಣ ಶೇ. 50ರಷ್ಟಿದೆ. ಭಾರತ ತಂಡ ಏಳು ಓವರ್ಗಳನ್ನು ಕಡಿಮೆ ಮಾಡಿದ್ದರಿಂದ ಒಟ್ಟು ಶೇ. 35ರಷ್ಟು ದಂಡ ವಿಧಿಸಲಾಗಿದೆ. ಶ್ರೇಯಸ್ ಅಯ್ಯರ್ ಈ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಔಪಚಾರಿಕ ವಿಚಾರಣೆಯ ಅಗತ್ಯ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.