ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ': ಭಾರತಕ್ಕೆ ಮತ್ತೊಂದು ಸಂಕಷ್ಟ, ಫೀಲ್ಡಿಂಗ್ ವೈಫಲ್ಯಕ್ಕೆ ದಿನೇಶ್ ಕಾರ್ತಿಕ್ ಗರಂ!

ಭಾರತದ ಕಳಪೆ ಫೀಲ್ಡಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಮಟ್ಟದಲ್ಲಿ ಇಂತಹ ತಪ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

Srinivasa Murthy VN
Updated On : 29 Nov 2026, 9:26 am

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಬ್ಯಾಟಿಂಗ್ ವೈಫಲ್ಯದ ಜೊತೆಗೆ ಫೀಲ್ಡಿಂಗ್‌ನಲ್ಲೂ ಭಾರತ ಆಟಗಾರರು ನಿರಾಸೆ ಮೂಡಿಸಿದ್ದಾರೆ.

ಫೀಲ್ಡಿಂಗ್ ವೇಳೆ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಎದುರಾಳಿ ತಂಡಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಭಾರತದ ಕಳಪೆ ಫೀಲ್ಡಿಂಗ್ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಮಟ್ಟದಲ್ಲಿ ಇಂತಹ ತಪ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 116 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಇದಕ್ಕೂ ಮೊದಲು ಪಂದ್ಯದ ಮೊದಲ ಎರಡು ದಿನಗಳಲ್ಲಿ ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್ ಮತ್ತು ಗುರ್ನೂರ್ ಬ್ರಾರ್ ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು.

Advertisement

Advertisement

ಈ ತಪ್ಪುಗಳ ಬಗ್ಗೆ ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಭಾರತದ ಫೀಲ್ಡಿಂಗ್ ಗುಣಮಟ್ಟವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಒಪ್ಪಿಕೊಳ್ಳಲು ಸಾಧ್ಯವಿಲ್ಲ

"ಈ ಮಟ್ಟದ ಕ್ರಿಕೆಟ್‌ನಲ್ಲಿ ಇಂತಹ ತಪ್ಪುಗಳನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಟಗಾರರೂ ಮನುಷ್ಯರೇ, ಅವರಿಂದಲೂ ತಪ್ಪುಗಳಾಗುತ್ತವೆ.

ಆದರೆ, ಒಂದೇ ರೀತಿಯ ತಪ್ಪುಗಳು ಪದೇಪದೆ ಮರುಕಳಿಸಿದಾಗ ಅದರ ಹಿಂದಿನ ಕಾರಣವನ್ನು ಕಂಡು ಹಿಡಿಯಬೇಕು. ಅದನ್ನು ಸರಿಪಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು" ಎಂದು ಕಾರ್ತಿಕ್ ಹೇಳಿದ್ದಾರೆ.

ಕ್ಯಾಚ್ ಹಿಡಿಯುವಲ್ಲಿ ಭಾರತದ ಕಳಪೆ ದಾಖಲೆ!

2025ರ ಆರಂಭದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಕ್ಯಾಚ್ ಹಿಡಿಯುವ ಸಾಮರ್ಥ್ಯ ಕಳಪೆಯಾಗಿದೆ. ಈ ಅವಧಿಯಲ್ಲಿ ಭಾರತ ತಂಡ ಶೇ.74.20ರಷ್ಟು ಕ್ಯಾಚ್‌ಗಳನ್ನು ಮಾತ್ರ ಯಶಸ್ವಿಯಾಗಿ ಹಿಡಿದಿದೆ.

ಈ ಮೂಲಕ ಕ್ಯಾಚ್ ಹಿಡಿಯುವ ಸಾಮರ್ಥ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡಗಳ ಪೈಕಿ ಭಾರತ ಎಂಟನೇ ಸ್ಥಾನದಲ್ಲಿದೆ. ಭಾರತದ ಫೀಲ್ಡಿಂಗ್ ಸಮಸ್ಯೆ ಇತ್ತೀಚಿನದ್ದಲ್ಲ. ಕಳೆದ ಕೆಲವು ಸಮಯದಿಂದ ತಂಡದ ಫೀಲ್ಡಿಂಗ್ ಮಟ್ಟ ಸಾಮಾನ್ಯವಾಗಿದ್ದು, ಇದರಲ್ಲಿ ಬದಲಾವಣೆ ತರಬೇಕಿದೆ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಬೇಕಾದರೆ ಫೀಲ್ಡಿಂಗ್ ಸುಧಾರಿಸಬೇಕು

"ಭಾರತ ತಂಡ ಕಳೆದ ಕೆಲವು ಸಮಯದಿಂದ ಅತ್ಯಂತ ಸಾಮಾನ್ಯ ಮಟ್ಟದ ಫೀಲ್ಡಿಂಗ್ ಪ್ರದರ್ಶನ ನೀಡುತ್ತಿದೆ. ಇದನ್ನು ಬದಲಾಯಿಸಿಕೊಳ್ಳಲು ತಂಡ ಬಯಸಬೇಕು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲುವ ಕನಸು ಕಾಣಬೇಕಾದರೆ ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮವಾಗಿದ್ದರೆ ಸಾಲದು. ಫೀಲ್ಡಿಂಗ್‌ನಲ್ಲೂ ದೊಡ್ಡ ಬದಲಾವಣೆಯಾಗಬೇಕು" ಎಂದು ಅವರು ಹೇಳಿದ್ದಾರೆ.

"ತಂಡದಲ್ಲಿ ಉತ್ಸಾಹದಿಂದ ಫೀಲ್ಡಿಂಗ್ ಮಾಡುವ ಆಟಗಾರರು ಇರಬೇಕು. ಪಂದ್ಯದ 100ನೇ ಅಥವಾ 120ನೇ ಓವರ್‌ನಲ್ಲೂ ಮೈದಾನದಲ್ಲಿ ತಮ್ಮ ದೇಹವನ್ನು ಪಣಕ್ಕಿಟ್ಟು ಚೆಂಡನ್ನು ತಡೆಯಲು ಸಿದ್ಧರಿರುವ ಆಟಗಾರರು ಬೇಕು" ಎಂದು ಕಾರ್ತಿಕ್ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದೆ. ಹೀಗಾಗಿ ಕಳಪೆ ಫೀಲ್ಡಿಂಗ್‌ಗೆ ಮೂಲಸೌಕರ್ಯದ ಕೊರತೆಯನ್ನು ಕಾರಣವಾಗಿ ನೀಡಲು ಸಾಧ್ಯವಿಲ್ಲ. ಆಟಗಾರರು ತಮ್ಮ ಫೀಲ್ಡಿಂಗ್ ಗುಣಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement