ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'ಪಂತ್ ನಾಯಕನಾಗದಿರಲು ಇದೇ ಕಾರಣ': ರಿಷಭ್ ಆಟದ ಬಗ್ಗೆ ಅಶ್ವಿನ್ ಸ್ಫೋಟಕ ಹೇಳಿಕೆ!

ಪಂತ್ ಅವರಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗುವ ಪ್ರತಿಭೆಯಿದೆ. ಆದರೆ, ಪದೇಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಅವರ ವೃತ್ತಿಜೀವನಕ್ಕೆ ಹಿನ್ನಡೆಯಾಗುತ್ತಿದೆ.

ಆರ್ ಅಶ್ವಿನ್ ಮತ್ತು ರಿಷಬ್ ಪಂತ್
Srinivasa Murthy VN
Updated On : 29 Nov 2026, 9:45 am

ಕ್ರೈಸ್ಟ್‌ಚರ್ಚ್: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಆಟದ ವೈಖರಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂತ್ ಅವರಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗುವ ಪ್ರತಿಭೆಯಿದೆ. ಆದರೆ, ಪದೇಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಅವರ ವೃತ್ತಿಜೀವನಕ್ಕೆ ಹಿನ್ನಡೆಯಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗುವ ಅವಕಾಶವೂ ಇದೇ ಕಾರಣಕ್ಕೆ ಕೈತಪ್ಪಿರಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನ ಹೇಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಪಂತ್ ಮತ್ತೊಮ್ಮೆ ಆಕ್ರಮಣಕಾರಿ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪಂತ್ ಆಟದ ಬಗ್ಗೆ ಮಾತನಾಡಿದ್ದಾರೆ.

Advertisement

Advertisement

ಜೇಕಬ್ ಡಫಿ ಬೌಲಿಂಗ್‌ನಲ್ಲಿ ಕ್ರೀಸ್‌ನಿಂದ ಮುಂದೆ ಬಂದ ಪಂತ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ ಚೆಂಡನ್ನು ಸರಿಯಾಗಿ ಹೊಡೆಯಲು ಸಾಧ್ಯವಾಗದೆ ಪಾಯಿಂಟ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್ ನೀಡಿದರು. 39 ಎಸೆತಗಳಲ್ಲಿ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

Also Read

'ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ': ಭಾರತಕ್ಕೆ ಮತ್ತೊಂದು ಸಂಕಷ್ಟ, ಫೀಲ್ಡಿಂಗ್ ವೈಫಲ್ಯಕ್ಕೆ ದಿನೇಶ್ ಕಾರ್ತಿಕ್ ಗರಂ!

'ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೇ ಪಂತ್‌ಗೆ ಸಮಸ್ಯೆ'

"ರಿಷಭ್ ಪಂತ್‌ಗೆ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗುವ ಪ್ರತಿಭೆಯಿದೆ. ಆದರೆ ಅವರು ತಮ್ಮ ಆಟವನ್ನು ಇನ್ನಷ್ಟು ಸುಧಾರಿಸಿಕೊಂಡು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಭಾರತ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಖಾಯಂ ಬ್ಯಾಟರ್ ಆಗಬಹುದಿತ್ತು. ಆಗ ವಿಕೆಟ್ ಕೀಪಿಂಗ್ ಮಾಡುವ ಅಗತ್ಯವೂ ಅವರಿಗೆ ಇರುತ್ತಿರಲಿಲ್ಲ" ಎಂದು ಅಶ್ವಿನ್ ಹೇಳಿದ್ದಾರೆ.

"ಪಂತ್ ಭಾರತ ಟೆಸ್ಟ್ ತಂಡದ ನಾಯಕನಾಗಲು ಏಕೆ ಸಾಧ್ಯವಾಗಲಿಲ್ಲ? ಅದಕ್ಕೆ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೇ ಕಾರಣ. ಅದು ಅವರನ್ನು ಹಲವು ಬಾರಿ ನಿರಾಸೆಗೊಳಿಸಿದೆ. ಇದೇ ನಾನು ಹೇಳಲು ಬಯಸುತ್ತಿರುವ ವಿಷಯ. ಇಷ್ಟೊಂದು ಪ್ರತಿಭಾವಂತ ಆಟಗಾರನಿಗೆ ಏಕದಿನ ಮತ್ತು ಟಿ20 ತಂಡಗಳಲ್ಲಿ ಏಕೆ ನಿರಂತರ ಅವಕಾಶ ಸಿಗುತ್ತಿಲ್ಲ? ಅವರ ನಿರ್ಧಾರಗಳೇ ಅನುಮಾನ ಮೂಡಿಸುತ್ತವೆ. ವಿಷಯ ಇಷ್ಟೇ ಸರಳ" ಎಂದು ಅಶ್ವಿನ್ ಹೇಳಿದ್ದಾರೆ.

ಪದೇಪದೆ ಒಂದೇ ರೀತಿಯ ತಪ್ಪು!

ಪಂತ್ ಪದೇಪದೆ ಒಂದೇ ರೀತಿಯ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಕಳೆದುಕೊಳ್ಳುತ್ತಿರುವುದು ಅವರ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಅಶ್ವಿನ್ ಹೇಳಿದ್ದಾರೆ. 'ವೇಗದ ಬೌಲರ್‌ಗಳ ವಿರುದ್ಧ ಕ್ರೀಸ್‌ನಿಂದ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಪ್ರಯತ್ನಿಸುವುದು ಪಂತ್ ಅವರ ಅಭ್ಯಾಸವಾಗಿದೆ. ಆದರೆ ಎದುರಾಳಿ ತಂಡದ ಫೀಲ್ಡರ್‌ಗಳು ಅದೇ ದಿಕ್ಕಿನಲ್ಲಿ ಇರಿಸಿರುವುದರಿಂದ ಸುಲಭವಾಗಿ ಕ್ಯಾಚ್ ನೀಡುತ್ತಿದ್ದಾರೆ' ಎಂದು ಅಶ್ವಿನ್ ವಿಶ್ಲೇಷಿಸಿದ್ದಾರೆ.

ಇದಕ್ಕೆ ಉದಾಹರಣೆಯಾಗಿ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟ್ರೆಂಟ್ ಬೌಲ್ಟ್‌ಗೆ, 2022ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕಗಿಸೊ ರಬಾಡಗೆ ಹಾಗೂ 2025ರಲ್ಲಿ ಗುವಾಹಟಿಯಲ್ಲಿ ಮಾರ್ಕೊ ಯಾನ್ಸನ್‌ಗೆ ಇದೇ ರೀತಿಯ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಒಪ್ಪಿಸಿದ್ದನ್ನು ಉಲ್ಲೇಖಿಸಿದ್ದಾರೆ.

"ನಾನು ಯಾವಾಗಲೂ ರಿಷಭ್ ಪಂತ್ ಭಾರತದ ಅತ್ಯಂತ ಪ್ರತಿಭಾವಂತ ಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರು ಎಂದು ಹೇಳುತ್ತಾ ಬಂದಿದ್ದೇನೆ. ಆದರೆ, ಅವರು ಹೆಚ್ಚಾಗಿ ಅಪಾಯಕಾರಿ ಹೊಡೆತಗಳಿಗೆ ಪ್ರಯತ್ನಿಸಿ ವಿಕೆಟ್ ಕಳೆದುಕೊಳ್ಳುತ್ತಾರೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಆಟವನ್ನು ಸುಧಾರಿಸಿಕೊಂಡರೆ, ಹಲವು ತಲೆಮಾರುಗಳ ಅತ್ಯುತ್ತಮ ಆಟಗಾರರ ಸಾಲಿನಲ್ಲಿ ನಿಲ್ಲುವ ಸಾಮರ್ಥ್ಯ ಅವರಿಗಿದೆ. ಅವರಲ್ಲಿ ಅಂತಹ ಪ್ರತಿಭೆಯಿದೆ. ಆದರೆ, ಹೀಗೆ ವಿಕೆಟ್ ಕಳೆದುಕೊಳ್ಳುವುದನ್ನು ನೋಡಿದಾಗ ಬೇಸರವಾಗುತ್ತದೆ" ಎಂದು ಅಶ್ವಿನ್ ಹೇಳಿದ್ದಾರೆ.

Also Read

2nd Test: ನ್ಯೂಜಿಲೆಂಡ್ ಬೌಲರ್`ಗಳ ಅಬ್ಬರಕ್ಕೆ ಬ್ರೇಕ್ ಹಾಕಿದ ಭಾರತದ ವಿಕೆಟ್ ಕೀಪರ್ ಬ್ಯಾಟರ್, ಆಪತ್ಭಾಂದವ ದ್ರುವ್ ಜುರೆಲ್!

ಭಾರತಕ್ಕೆ ಸಂಕಷ್ಟ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತೆ ಕುಸಿದಿದೆ. ಪಂತ್ ವಿಕೆಟ್ ಪತನದ ಬಳಿಕ ಭಾರತ ತಂಡದ ಕುಸಿತ ಮುಂದುವರಿದಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ 116 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ನ್ಯೂಜಿಲೆಂಡ್‌ಗಿಂತ ಭಾರತ ಇನ್ನೂ 240 ರನ್‌ಗಳ ಹಿನ್ನಡೆಯಲ್ಲಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement