ನವದೆಹಲಿ: ಏಷ್ಯಾ ಕಪ್ ಟ್ರೋಫಿ ಸ್ವೀಕಾರದ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಮತ್ತೆ ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ.
ಭಾನುವಾರ ನಡೆದ 2026ರ ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಆದರೆ, ಫೈನಲ್ ಪಂದ್ಯ ಮುಗಿದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾರತ ತಂಡದ ಆಟಗಾರ್ತಿಯರು ಮೈದಾನಕ್ಕೆ ಆಗಮಿಸಲಿಲ್ಲ. ಇದರಿಂದಾಗಿ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಮತ್ತೊಮ್ಮೆ ಮುಜುಗರ ಉಂಟಾಯಿತು.
ವರ್ಷದ ಅಂತರದಲ್ಲಿ 2ನೇ ಪ್ರಕರಣ
ಕೇವಲ 12 ತಿಂಗಳ ಅವಧಿಯಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿವೆ.
ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರಾಗಿರುವುದರ ಜೊತೆಗೆ ಪಾಕಿಸ್ತಾನ ಸರ್ಕಾರದ ಆಂತರಿಕ ಸಚಿವರೂ ಆಗಿದ್ದಾರೆ. 2025ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಪುರುಷರ ತಂಡವು ರಾಜಕೀಯ ಉದ್ವಿಗ್ನತೆ ಹಾಗೂ ನಖ್ವಿ ಅವರ ಭಾರತ ವಿರೋಧಿ ನಿಲುವಿನ ಹಿನ್ನೆಲೆಯಲ್ಲಿ ಅವರಿಂದ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು.
ದುಬೈನಲ್ಲಿ ನಡೆದ ಫೈನಲ್ ಪಂದ್ಯದ ಬಳಿಕ ನಖ್ವಿ ಟ್ರೋಫಿಯೊಂದಿಗೆ ಪ್ರಶಸ್ತಿ ಪ್ರದಾನ ವೇದಿಕೆಯಿಂದ ನಿರ್ಗಮಿಸಿದ್ದರು. ಹೀಗಾಗಿ, ಭಾರತ ತಂಡಕ್ಕೆ ಇದುವರೆಗೂ ಮೂಲ ಟ್ರೋಫಿ ಹಸ್ತಾಂತರವಾಗಿಲ್ಲ.
ಭಾನುವಾರ ನಡೆದ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲೂ ಇದೇ ರೀತಿಯ ಘಟನೆ ಮರುಕಳಿಸಿತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿ ಗೆದ್ದರೂ, ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿತು.
ನಖ್ವಿಗೆ ಮೊದಲೇ ಮಾಹಿತಿ ನೀಡಿದ್ದ ಬಿಸಿಸಿಐ?
ವರದಿಯ ಪ್ರಕಾರ, ಮೊಹ್ಸಿನ್ ನಖ್ವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದರೆ ಭಾರತ ತಂಡವು ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂಬುದನ್ನು ಬಿಸಿಸಿಐ, ಎಸಿಸಿ ಅಧಿಕಾರಿಗಳಿಗೆ ಮೊದಲೇ ತಿಳಿಸಿತ್ತು ಎನ್ನಲಾಗಿದೆ. ಈ ಬಾರಿ ಟ್ರೋಫಿಯನ್ನು ಪ್ರಶಸ್ತಿ ಪ್ರದಾನ ವೇದಿಕೆಗೆ ತರಲಾಗಲಿಲ್ಲ. ಆದರೂ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಅಧಿಕೃತ ಮಾರ್ಗಗಳ ಮೂಲಕ ಮುಂದಿನ ದಿನಗಳಲ್ಲಿ ಟ್ರೋಫಿಗಳನ್ನು ಮರಳಿ ಪಡೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಉಪಾಧ್ಯಕ್ಷರಿಂದ ಟ್ರೋಫಿ ಪಡೆಯಲು ಸಿದ್ಧವಾಗಿದ್ದ ಭಾರತ
ಭಾರತ ಮಹಿಳಾ ತಂಡವು ಎಸಿಸಿ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರಿಂದ ಟ್ರೋಫಿ ಸ್ವೀಕರಿಸಲು ಸಿದ್ಧವಾಗಿತ್ತು. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹಿರಂಗಪಡಿಸಿದ್ದಾರೆ. ಆದರೆ, ಈ ಪ್ರಸ್ತಾವನೆಯನ್ನು ನಖ್ವಿ ಒಪ್ಪದ ಹಿನ್ನೆಲೆಯಲ್ಲಿ ಬಿಸಿಸಿಐ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿತು ಎನ್ನಲಾಗಿದೆ.
“ಸುಮಾರು ಒಂದೂವರೆ ವರ್ಷಗಳ ಹಿಂದೆ ನಡೆದ ಪುರುಷರ ಏಷ್ಯಾ ಕಪ್ ಸಂದರ್ಭದಲ್ಲಿ ನಾವು ತೆಗೆದುಕೊಂಡಿದ್ದ ನಿಲುವಿನಂತೆಯೇ, ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭದ ಭಾಗವಾಗಲು ನಾವು ಬಯಸಲಿಲ್ಲ. ಪುರುಷರ ಏಷ್ಯಾ ಕಪ್ ಟ್ರೋಫಿಯನ್ನೂ ನಾವು ಇನ್ನೂ ಸ್ವೀಕರಿಸಿಲ್ಲ. ಆದರೆ, ಉಗ್ರರ ಕೈಯಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಅನೇಕ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ನಿಲುವನ್ನು ಕಾಪಾಡಿಕೊಳ್ಳಲು ನಾವು ಬಯಸಿದ್ದೇವೆ ಎಂದು ಹೇಳಿದ್ದರು.
ಎಸಿಸಿ ಉಪಾಧ್ಯಕ್ಷರು ಟ್ರೋಫಿ ಹಸ್ತಾಂತರಿಸುವಂತೆ ನಾವು ಮನವಿ ಮಾಡಿದ್ದೆವು. ಆದರೆ, ಅದನ್ನು ಒಪ್ಪಿಕೊಳ್ಳಲಾಗಲಿಲ್ಲ. ಹೀಗಾಗಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸದಿರುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಸೈಕಿಯಾ ಹೇಳಿದ್ದಾರೆ.
ಎರಡೂ ಟ್ರೋಫಿಗಳು ಭಾರತಕ್ಕೆ ಮರಳಲಿವೆ
ಮುಂದೊಂದು ಹಂತದಲ್ಲಿ ಎರಡೂ ಏಷ್ಯಾ ಕಪ್ ಟ್ರೋಫಿಗಳು ಬಿಸಿಸಿಐ ವಶಕ್ಕೆ ಬರಲಿವೆ ಎಂದು ದೇವಜಿತ್ ಸೈಕಿಯಾ ಭರವಸೆ ನೀಡಿದ್ದಾರೆ.
“ಏಷ್ಯಾ ಕಪ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸುತ್ತದೆ. ಇಡೀ ದೇಶವೇ ನಮ್ಮ ಕ್ರಿಕೆಟಿಗರ ಸಾಧನೆಯಿಂದ ಸಂತಸಗೊಂಡಿದೆ ಹಾಗೂ ಹೆಮ್ಮೆಪಡುತ್ತಿದೆ. ಮುಂದೊಂದು ಹಂತದಲ್ಲಿ ಎರಡೂ ಟ್ರೋಫಿಗಳನ್ನು ನಾವು ಮರಳಿ ಪಡೆಯಲಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.