ಸಂಗ್ರಹ ಚಿತ್ರ 
ದಸರಾ

ಹುಲಿವೇಷ... ಕರಾವಳಿ ದಸರಾ ವಿಶೇಷ

ಅರ್ಧವಾರ್ಷಿಕ ಪರೀಕ್ಷೆ ಮುಗಿದು ಮಕ್ಕಳಿಗೆಲ್ಲಾ ಶಾಲೆಗೆ ನವರಾತ್ರಿ ರಜೆ.., ರಜೆ ಸಿಕ್ಕಿದ ಸಂಭ್ರಮದಲ್ಲಿ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿದ್ದರೆ ರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ...ಎಂದು ಸದ್ದು...

ಅರ್ಧವಾರ್ಷಿಕ ಪರೀಕ್ಷೆ ಮುಗಿದು ಮಕ್ಕಳಿಗೆಲ್ಲಾ ಶಾಲೆಗೆ ನವರಾತ್ರಿ ರಜೆ.., ರಜೆ ಸಿಕ್ಕಿದ ಸಂಭ್ರಮದಲ್ಲಿ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿದ್ದರೆ ರೆಮೆ ಟೆಟ್ಟೆ.. ಡೆರೆಮೆ ಟೆಟ್ಟೆ...ಎಂದು ಸದ್ದು ಮಾಡಿಕೊಂಡು ಗುಡ್ಡದ ಆಚೆಯಿಂದ ಇಳಿದುಕೊಂಡು ಬರುತ್ತವೆ. ಅದನ್ನು ನೋಡಿದ ಪುಟ್ಟ ಮಕ್ಕಳು ಹೆದರಿ ಮನೆಯ ಮೂಲೆಗೆ ಓಡಿಹೋಗಿ ಮುದುಡಿ ಕುಳಿತುಕೊಳ್ಳುತ್ತವೆ. ಇಲ್ಲವೇ ಅಮ್ಮನ ಸೆರಗಿನ ಹಿಂದೆ ಬಚ್ಚಿಟ್ಟುಕೊಳ್ಳುತ್ತವೆ. ಇದು ಕರಾವಳಿ ಜಿಲ್ಲೆಯಲ್ಲಿ ನವರಾತ್ರಿ ಸಮಯದಲ್ಲಿ ಕಂಡುಬರುವ ದೃಶ್ಯ. ಹುಲಿ ವೇಷ ಹಾಕಿಕೊಂಡು ಥೇಟ್ ಹುಲಿಯಂತೆ ವಿಶಿಷ್ಟ ನರ್ತನ ಮಾಡಿಕೊಂಡು ಮನೆಮನೆಗೆ ಹೋಗುತ್ತವೆ. ಹುಲಿ ವೇಷಗಾರರ ಜೊತೆ ಚೆಂಡೆ ಬಾರಿಸುವವರು ಮತ್ತು ಅವರ ತಂಡ ಇರುತ್ತದೆ. ಹುಲಿ ವೇಷಗಳು ತಂಡದಲ್ಲಿ ಬರುತ್ತವೆ. ಇದಲ್ಲದೆ ಸಿಂಹ, ಕರಡಿ ವೇಷಗಳು ಸಹ ನವರಾತ್ರಿ ಸಮಯದಲ್ಲಿ ಮನೆ ಮನೆಗಳಿಗೆ, ನಗರದ ಸುತ್ತಮುತ್ತ ಬೀದಿಗಳಲ್ಲಿ ಬರುತ್ತವೆ. ಇದನ್ನು ನೋಡಿದ ಮಕ್ಕಳು ಕುಣಿದು ಕುಪ್ಪಳಿಸುತ್ತವೆ. ಮಕ್ಕಳನ್ನು-ಮನೆಯವರನ್ನು ರಂಜಿಸಿದ ಪ್ರಯುಕ್ತ ಮನೆಯವರು ಏನಾದರು ವಸ್ತುವೋ, ಹಣವೋ, ಧಾನ್ಯಗಳನ್ನೋ ದಾನ ಕೊಡುತ್ತಾರೆ.

ಹೀಗೆ ನವರಾತ್ರಿ ಸಮಯದಲ್ಲಿ ನೀವು ಕರಾವಳಿ ಜಿಲ್ಲೆಗೆ ಹೋದರೆ ಅಲ್ಲಿ ಹುಲಿ, ಕರಡಿ, ಸಿಂಹ ಹೀಗೆ ನಾನಾ ವೇಷಗಳು ಕಾಣಸಿಗುತ್ತವೆ. ಮಂಗಳೂರಿನಲ್ಲಿ ಹುಲಿವೇಷದ ಸುಮಾರು 50 ತಂಡಗಳಿದ್ದು, ಒಂದೊಂದು ತಂಡದಲ್ಲಿ ಹತ್ತಿಪ್ಪತ್ತು ವೇಷಧಾರಿಗಳು ಇರುತ್ತಾರೆ.
ವೇಷಧಾರಿ ತಾಯಿ ಹುಲಿ ಮರಿಗಳಿಗೆ ಬೇಟೆ ಕಲಿಸುವುದು, ಹಾಲುಣಿಸುವುದು, ಮರಿ ಹುಲಿಗಳ ಆಟ, ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿಯೇ ಪ್ರದರ್ಶಿಸುತ್ತಾರೆ. ಪಲ್ಟಿ ಹೊಡೆಯುವುದು, ಮೆಣಸಿನ ಹುಡಿ ಕಲಕಿದ ನೀರಿನಿಂದ ಹಿಮ್ಮುಖವಾಗಿ ನಾಣ್ಯ ತೆಗೆಯವುದು, ಝಂಡಾ ಕಸರತ್ತು, ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ‘ಅಕ್ಕಿ ಮುಡಿ’ ಎತ್ತುವ ಕಸರತ್ತು ಹುಲಿವೇಷದ ಗತ್ತು, ಗಮ್ಮತ್ತಾಗಿರುತ್ತದೆ.

ನವರಾತ್ರಿಗೆ ವೇಷ ಧರಿಸುವುದಾದರೆ ಚೌತಿಗೆ ಅಥವಾ ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿ ನೆನೆದು ಸಂಕಲ್ಪ ಮಾಡಬೇಕು. ಅಂದು ತಾರ್ಸೆಯವರಿಂದ ಕುಣಿತದ ಅಭ್ಯಾಸ. ಮಕ್ಕಳಾದರೆ ನುರಿತ ಹುಲಿವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಾಹಾರ, ಮದ್ಯ ಸೇವಿಸುವಂತಿಲ್ಲ. ಈ ಸಂಪ್ರದಾಯಕ್ಕೆ ಕರಾವಳಿ ಭಾಗದಲ್ಲಿ ಊದು ಹಾಕುವುದು ಎಂಬ ಹೆಸರು.

ಈ ವೇಷ ಬಣ್ಣದ ಮೂಲಕ ಗಮನ ಸೆಳೆಯುತ್ತದೆ. 10-12 ಮಂದಿ ತಂಡಕ್ಕೆ ಬಣ್ಣ ಹಚ್ಚಬೇಕೆಂದರೆ ಇಡೀ ರಾತ್ರಿ ಕೆಲಸ. ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ. ಬಣ್ಣ ಹಾಕಲು ವೇಷಧಾರಿ ಮೈಯ ರೋಮವನ್ನೆಲ್ಲ ತೆಗೆಯಬೇಕು. ಇದಕ್ಕೆಲ್ಲ ನುರಿತವರನ್ನು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಹಿಂದೆಲ್ಲ ಸಾಂಪ್ರದಾಯಿಕ ಬಣ್ಣ ಬಳಸುತ್ತಿದ್ದರು. ಬಣ್ಣ ವಾರಗಟ್ಟಲೆ ಉಳಿಯಲು ಮೊಟ್ಟೆಯ ಬಿಳಿ ದ್ರವ ಬಳಸುತ್ತಿದ್ದರು. ಈಗ ರಾಸಾಯನಿಕ ಬಣ್ಣವೇ ಗತಿಯಾಗಿದ್ದು, ಬೇಗನೇ ಕಿತ್ತು ಹೋಗುತ್ತದೆ.

ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ... ಎಂಟು ಪೌಲ.. ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

ನವರಾತ್ರಿಯ ಒಂಭತ್ತು ದಿನ ಕೂಡ ಊರಿಗೆ ಊರೇ ಸಂಭ್ರಮ ಮತ್ತು ಹಬ್ಬದ ವಾತಾವರಣದಲ್ಲಿ ಮುಳುಗಿರುತ್ತದೆ. ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಗೋಕರ್ಣಾಥೇಶ್ವರ, ರಥಬೀದಿ ವೆಂಕಟರಮಣ ದೇವಸ್ಥಾನ, ಬೋಳಾರ ಮಂಗಳಾದೇವಿ, ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ಹೀಗೆ ಜಿಲ್ಲೆಯ ಅಷ್ಟೂ ಪ್ರಮುಖ ದೇವಾಲಯಗಳಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿರುತ್ತವೆ.

ಸುಮನಾ ಉಪಾಧ್ಯಾಯ
ಮಾಹಿತಿ- ವಿಕಿಪೀಡಿಯ



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT