ಸಸ್ಯ ಕಾಶಿಯಲ್ಲಿ ದಸರಾ ವೈಭವ
ಗುಲಾಬಿ ಹೂಗಳಿಂದ ನಿರ್ಮಾಣವಾದ ಮೈಸೂರು ಅರಮನೆ, ಹೂಗಳಿಂದ ಅಲಂಕರಿಸಿದ...
ಬೆಂಗಳೂರು: ಗುಲಾಬಿ ಹೂಗಳಿಂದ ನಿರ್ಮಾಣವಾದ ಮೈಸೂರು ಅರಮನೆ, ಹೂಗಳಿಂದ ಅಲಂಕರಿಸಿದ ಕಾಲಾಳುಗಳು, ಮೆರವಣಿಗೆಯಲ್ಲಿ ಸಾಗಿದ ಆನೆಗಳು...
ಹೀಗೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಮೈಸೂರಿನ ದಸರಾ ವೈಭವ ನೆನಪಿಸುತ್ತಿದೆ. ಆ.8ರಿಂದ 17ರವರೆಗೆ ನಡೆಯಲಿರುವ ಪ್ರದರ್ಶನಕ್ಕೆ ಮೊದಲ ದಿನವೇ ಸಾರ್ವಜನಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಗಾಜಿನ ಮನೆಯಲ್ಲಿ 3 ಲಕ್ಷ ಗುಲಾಬಿ ಹೂಗಳಿಂದ ನಿರ್ಮಿಸಿರುವ ಮೈಸೂರು ಅರಮನೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪುಷ್ಪ ಪ್ರೇಮಿಗಳು ಭೇಟಿ ನೀಡುತ್ತಿದ್ದಾರೆ.
ಕೆಂಪು, ಹಳದಿ, ಬಿಳಿ, ಗುಲಾಬಿ ಹೂಗಳನ್ನು ಬಳಸಿ ಅರಮನೆ ನಿರ್ಮಿಸಲಾಗಿದೆ. 45 ಅಡಿ ಉತ್ತ, 27 ಅಡಿ ಎತ್ತರ ಹಾಗೂ 12 ಅಡಿ ಅಗಲದ ಅರಮನೆ ಈ ಬಾರಿಯ ವಿಶೇಷವಾಗಿದ್ದು, ಕಳೆದ ಎರಡು ಪ್ರದರ್ಶನಗಳಲ್ಲಿ ಈ ಮಟ್ಟಿಗಿನ ಬೃಹತ್ ಕಲಾಕೃತಿ ನಿರ್ಮಾಣವಾಗಿರಲಿಲ್ಲ. ಸೈನಿಕರು, ಕುದುರೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಕೃತಿಗಳು ಅರಮನೆಗೆ ಸ್ವಾಗತ ನೀಡುತ್ತಿವೆ.
ಮತ್ತೊಂದು ಬದಿಯಲ್ಲಿ 110 ಅಡಿ ಉದ್ದ ಹಾಗೂ 12 ಅಡಿ ಅಗಲಕ್ಕೆ ಬೋನ್ಸಾಯ್ ಗಿಡಗಳನ್ನು ಜೋಡಿಸಿಡಲಾಗಿದೆ. ಪೆಟೋನಿಯಾ, ಜಿರೇನಿಯಂ, ಬಿಗೋನಿಯಾ, ಕೋಲಿಯಸ್, ಫರ್ನ್ಸ್ ಜಾತಿಯ ಹೂಗಳು ಬಂದವರನ್ನು ಸೆಳೆಯುತ್ತಿವೆ.
ಪ್ರದರ್ಶನಕ್ಕೆ 1 ಕೋಟಿಗಿಂತಲೂ ಹೆಚ್ಚು ವೆಚ್ಚ ಮಾಡಿದ್ದು, ಪ್ರವೇಶ ದ್ವಾರದಿಂದ ಬರುವ ಆದಾಯ 1.40 ಕೋಟಿ ಎಂದು ನಿರೀಕ್ಷಿಸಲಾಗಿದೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ
ವಯಸ್ಕರಿಗೆ 40 ರುಪಾಯಿ, ರಜಾದಿನಗಳಲ್ಲಿ 50 ರುಪಾಯಿ ಹಾಗೂ ಮಕ್ಕಳಿಗೆ 10 ರುಪಾಯಿ ಟಿಕೆಟ್ ದರವಿದೆ. ಆ.13 ಹಾಗೂ 14ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ.