ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಹೆಚ್ಡಿಕೆ ಸೆಳೆಯುವ 'ಕೈ' ತಂತ್ರ ದೇವೇಗೌಡರಿಂದ ವಿಫಲ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು...

Mainashree
Updated On : 9 Aug 2014, 8:42 am

ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಇಬ್ಬರು ಮಕ್ಕಳನ್ನು ದೆಹಲಿಗೆ ಹಠಾತ್ತನೆ ಕರೆಸಿಕೊಂಡಿದ್ದು ಏಕೆ ಎಂಬುದೇ ಈಗ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯ.

ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ತೀವ್ರ ಯತ್ನ ನಡೆಸುತ್ತಿರುವುದರ ಸುಳಿವು ಅರಿತ ಗೌಡರು, ಆ ಬಗ್ಗೆ ಚರ್ಚಿಸಲು ಇಬ್ಬರೂ ಮಕ್ಕಳನ್ನು ದೆಹಲಿಗೆ ಕರೆಸಿಕೊಂಡಿದ್ದರು. ಇದನ್ನು ಗೌಡರ ಆಪ್ತರು ಖಚಿತಪಡಿಸಿದ್ದಾರೆ.

ಎಚ್ಡಿಕೆ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂಬ ಬಗ್ಗೆ ಸುದ್ದಿ ಹರಡಿದ್ದ ಹಿನ್ನೆಲೆಯಲ್ಲಿ ದೇವೇಗೌಡರು, ತಮಗೆ ಆತ್ಪರಾಗಿರುವ ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲ್ ಅವರೊಡನೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪುತ್ರನನ್ನು ಕಾಂಗ್ರೆಸ್‌ಗೆ ಸೆಳೆಯುವ ಯತ್ನ ನಡೆಯುತ್ತಿದೆ ಎಂಬುದು ಖಚಿತವಾಗಿದೆ. ಎಚ್ಚೆತ್ತ ಗೌಡರು ಇಬ್ಬರೂ ಮಕ್ಕಳನ್ನು ಕೂಡಲೇ ಕರೆಸಿಕೊಂಡು ಮಾತನಾಡಿದ್ದಾರೆ ಎಂಬುದನ್ನು ಹಾಸನದಲ್ಲಿ ಇರುವ ಗೌಡರ ಆಪ್ತ ವಲಯ ಖಚಿತಪಡಿಸಿದೆ.

ಕಾಂಗ್ರೆಸ್ ಸೇರುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ರಾಜಕೀಯ ನಿಂತ ನೀರಲ್ಲ, ನಾನು ಸಮಾಜವಾದಿ ಜನತಾ ಪಕ್ಷ ಕಟ್ಟಿದ್ದಾಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡೇ ಸ್ಥಾನಗಳನ್ನು ಗೆದ್ದಿದ್ದೆವು. ನಂತರದಲ್ಲಿ ಪಿಎಂ, ಸಿಎಂ ಆಗಲಿಲ್ವೇ, ಒಂದು ವೇಲೆ ಕುಮಾರಸ್ವಾಮಿ ಕಾಂಗ್ರೆಸ್ ಸೇರಿದರೆ ಐಡೆಂಟಿಟಿ ಇರುವುದಿಲ್ಲ. ಹತ್ತರಲ್ಲಿ ಒಬ್ಬರಾಗಬಹುದಷ್ಟೇ. ಕಾಂಗ್ರೆಸ್ ಸೇರುವುದು 'ಸುಂಡ (ಇಲಿ) ಸುಮಾನ ಹತ್ತಿ ಬಿಸಿ ಗಂಜಿಗೆ ಬಿದ್ದಂತಾಗುತ್ತದೆ' ಅಷ್ಟೇ. ಪಕ್ಷದಲ್ಲಿ ಬೇರೆ ವರ್ಗದ ಸಜ್ಜನ ಮುಖಂಡರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದರೆ ಯಶಸ್ಸು ಗಳಿಸುವುದು ಕಷ್ಟವಲ್ಲ ಎಂದು ಎಚ್ಡಿಕೆಗೆ ಬುದ್ಧಿವಾದ ಹೇಳಿದ್ದಾರೆ.

ಇದೇ ಕಾಲಕ್ಕೆ ಮಕ್ಕಳಂತೆ ಹಠ ಹಿಡಿಯುವ ಪ್ರವತ್ತಿಯನ್ನು ಕೈ ಬಿಟ್ಟು ಸಂಘಟನೆಗೆ ಆದ್ಯತೆ ನೀಡಬೇಕಲ್ಲವೇ, ಜನರೊಂದಿಗೆ ಕೋಪಗೊಳ್ಳುವುದನ್ನು ಬಿಟ್ಟು ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಮತ್ತೊಬ್ಬ ಪುತ್ರ ಎಚ್.ಡಿ ರೇವಣ್ಣನವರಿಗೂ ಗೌಡರು ಕಿವಿಮಾತು ಹೇಳಿದ್ದಾರೆ. ಪಕ್ಷದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಇಬ್ಬರೊಂದಿಗೂ ಚರ್ಚಿಸಿದ್ದಾರೆ ಎಂದು ತಿಳಿದಿದೆ.

ಮುನಿಸು ಶಮನ: ಚಿಕ್ಕೋಡಿ, ಬಳ್ಳಾರಿ ಗ್ರಾಮೀಣ ಮತ್ತು ಶಿಕಾರಿಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯಥಇರ್ಗಳನ್ನು ಕಣಕ್ಕೆ ಇಳಿಸುವ ವಿಚಾರದಲ್ಲಿ ಗೌಡರು ಮತ್ತು ಎಚ್ಡಿಕೆ ನಡುವೆ ಮನಸ್ತಾಪ ಉಂಟಾಗಿತ್ತು. ಇದರಿಂದ ಉಂಟಾಗಿದ್ದ ಅಸಮಾಧಾನವನ್ನು ಸಹ ಗೌಡರು ನಿವಾರಿಸಿದರು. ಇಂದಿನ ಚುನಾವಣೆ ಹಣದಿಂದ ನಡೆಯುವ ಚುನಾವಣೆಗಳು, ಹಣ ನೀಡಲಿಲ್ಲ ಎಂದು ಅಭ್ಯರ್ಥಿ ಲೋಕಸಭೆಯಲ್ಲಿ ಕೆಲ ಅಭ್ಯರ್ಥಿಗಳು ಮಾಡಿದಂತೆ ನಾಮಪತ್ರ ಹಿಂತೆಗೆದುಕೊಂಡರೆ ಬಾರಿ ಹಾನಿ ಆಗುತ್ತದೆ. ಅದಕ್ಕಿಂತ ಅಭ್ಯರ್ಥಿಗಳನ್ನು ಹಾಕದೆ ಇರುವುದು ಲೇಸು ಎಂಬ ಗೌಡರ ಮಾತಿಗೆ ಇಬ್ಬರು ಸಮ್ಮತಿ ಸೂಚಿಸಿದ್ದಾರೆ.

ಎಚ್ಡಿಕೆ ಹಿಂದೇಟು: ಕುಮಾಸ್ವಾಮಿ ಅವರ ಆಫ್ತ ಬಳಗದ ಕೆಲ ಮುಖಂಡರೂ ಕಾಂಗ್ರೆಸ್ ಸೇರುವುದಕ್ಕೆ ಓಕೆ ಎಂದಿದ್ದರು. ಆದರೆ ಕಾಂಗ್ರೆಸಿಗರಿಗೆ ಸೋನಿಯಾ ಫೋಟೋ ತೋರಿಸದೆ ಚುನಾವಣೆ ಎಂದುರಿಸಲಿಕ್ಕೆ ಆಗುವುದದಿಲ್ಲವೋ ಹಾಗೇ ಹಳೇ ಮೈಸೂರು ಪ್ರಾಂತ್ಯದಲ್ಲಿ ದೇವೇಗೌಡರ ಫೋಟೋ ತೋರಿಸಿಕೊಂಡೇ ಚುನಾವಣೆ ಎದುರಿಸಬೇಕು. ಈ ಕಾರಣಗಳಿಂದ ಎಚ್ಡಿಕೆ ಕೂಡ ಕಾಂಗ್ರೆಸ್ ಸೇರುವ ಪ್ರಸ್ತಾಪ ಕೈ ಬಿಟ್ಟಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡರು ಹೇಳುತ್ತಾರೆ.

ಕಾಂಗ್ರೆಸ್ ಲೆಕ್ಕಾಚಾರವೇನು?
ರಾಜ್ಯದಲ್ಲಿ ಒಕ್ಕಲಿಗರನ್ನು ಸೆಳೆಯುವ ನಾಯಕರು ಪಕ್ಷದಲ್ಲಿ ಇಲ್ಲ. ಸಚಿವರಾದ ಕೃಷ್ಣಬೈರೇಗೌಡ ಮತ್ತು ಜಯಚಂದ್ರ ಅವರು ಒಕ್ಕಲಿಗ ಸಮುದಾಯವನ್ನು ಸೆಳೆಯುವ ವರ್ಚಸ್ವಿ ನಾಯಕರಲ್ಲ. ಅಲ್ಲದೇ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಸಂಸ್ಕೃತಿಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಿಲ್ಲ. ಈ ಹಿನ್ನೆಲಯಲ್ಲಿ ಮೂಲ ಕಾಂಗ್ರೆಸಿಗರು ಬಂಡಾಯವೆದ್ದರೆ ಪ್ರತಿಯಾಗಿ ಸಿಎಂ ಸಿಡಿದೇಳುವುದು ಸಹಜ. ಆಗ ಪಕ್ಷ ಅತಂತ್ರ ಸ್ಥಿತಿಯನ್ನು ಅನುಭವಿಸುದಕ್ಕಿಂತ ಮೊದಲೇ ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗರನ್ನು ಸೆಳೆಯಲು ಎಚ್ಡಿಕೆ ಬಂದರೆ ಸೂಕ್ತ ಎಂಬ ನಿಲುವನ್ನು ಕಾಂಗ್ರೆಸ್ ಮುಖಂಡರು ತಳೆದು, ಎಚ್ಡಿಕೆಯನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement