ಮತ್ತೆ ವಿವಾದದಲ್ಲಿ ಬಿಬಿಎಂಪಿ
ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸುವ ಭರದಲ್ಲಿರುವ ಬಿಬಿಎಂಪಿ ಅಧಿಕಾರಿಗಳು, ಅರಣ್ಯ ಸಂರಕ್ಷಣಾ...
ಬೆಂಗಳೂರು: ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸುವ ಭರದಲ್ಲಿರುವ ಬಿಬಿಎಂಪಿ ಅಧಿಕಾರಿಗಳು, ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ತಿರಸ್ಕರಿಸುತ್ತಿರುವ ಆರೋಪ ಕೇಳಿಬರುತ್ತಿದೆ.
ಈಗಾಗಲೇ ಮಂಡೂರು ಕಸ ವಿಲೇವಾರಿ ವಿಷಯದ ಕುರಿತು ತೀವ್ರ ವಿವಾದಕ್ಕೀಡಾಗಿದ್ದು ಬಿಬಿಎಂಪಿ, ಈಗ ಬನಶಂಕರಿಯಲ್ಲಿ ಮತ್ತೊಂದು ಘಟಕ ಸ್ಥಾಪನೆಗೆ ಮುಂದಾಗಿದೆ. ಈ ಘಟಕ ಸ್ಥಾಪನೆಯಿಂದ ಹತ್ತಿರದಲ್ಲಿರುವ ಬಿ.ಎಂ.ಕಾವಲು ಸಂರಕ್ಷಿತ ಅರಣ್ಯ ನಾಶಗೊಳ್ಳುವುದೆಂಬ ಭೀತಿ ಪರಿಸರ ಪ್ರೇಮಿಗಳಲ್ಲಿ ವ್ಯಕ್ತವಾಗಿದೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಬನಶಂಕರಿಯಲ್ಲಿ ಈಗಾಗಲೇ ಕಸವಿಲೇವಾರಿಗಾಗಿ 2 ಘಟಕಗಳಿದ್ದು, ಮತ್ತೊಂದು ಘಟಕ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದೆ. ಈ ಬಾರಿ ಆಯ್ಕೆಯಾಗಿರುವ ಪ್ರದೇಶದ ಹತ್ತಿರವಿರುವ ಬಿ.ಎಂ. ಕಾವಲು ಸಂರಕ್ಷಿತ ಅರಣ್ಯ ಪ್ರದೇಶ ನಾಶಗೊಳ್ಳುವ ಸಾಧ್ಯತೆಗಳಿವೆ. ಬಿಬಿಎಂಪಿಯ ಈ ನಿರ್ಧಾರವು ಅರಣ್ಯ ಕಾಯ್ದೆಯ ಉಲ್ಲಂಘಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಇದೇ ಪ್ರದೇಶದ ಮಾಲೀಕನಾಗಿದ್ದ ದೇವರಾಜ್ ಎಂಬುವವರು ಬೆಳೆ ಬೆಳೆಯುವಾಗ, ಬೆಳೆ ಹಾಳಾಗದಂತೆ ಕ್ರಿಮಿ ನಾಶಕಗಳನ್ನು ಸಿಂಪಡಿಸಲು ಮುಂದಾದಾಗ, ಅರಣ್ಯ ನಾಶವಾಗುತ್ತದೆ ಎಂದು ಸರ್ಕಾರ ನಿಷೇಧ ಹೇರಿ, ನಂತರ ಆ ಪ್ರದೇಶವನ್ನು ಬಿಡಿಎ ಒತ್ತುವರಿ ಮಾಡಿಕೊಂಡಿತ್ತು. ಈಗ ಇದೇ ಪ್ರದೇಶವನ್ನೇ ಬಿಬಿಎಂಪಿ ಕಸವಿಲೇವಾರಿ ಘಟಕ ಸ್ಥಾಪನೆಗಾಗಿ ಆಯ್ಕೆ ಮಾಡಿದೆ.
ಬಿಬಿಎಂಪಿಯ ಈ ನಿರ್ಧಾರದಿಂದ ಸ್ಥಳದಲ್ಲಿರುವ ಬಿ.ಎಂ.ಕಾವಲು ಅರಣ್ಯ ಪ್ರದೇಶದ ವನ್ಯಜೀವಿಗಳು ನಾಶಗೊಳ್ಳುತ್ತವೆ. ಆದ್ದರಿಂದ ಬಿಬಿಎಂಪಿ ಕೂಡಲೇ ನಿರ್ಧಾರವನ್ನು ಬದಲಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.