ಸರ್ಕಾರದ ಆದೇಶದಿಂದ ನ್ಯಾಯಾಂಗ ನಿಂದನೆ
ಕೆಪಿಎಸ್‌ಸಿ ವಿವಾದಕ್ಕೆ ಹೊಸ ತಿರುವು ನೀಡಿರುವ ಬಿಜೆಪಿ, ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ದವಾಗಿ...
ಬೆಂಗಳೂರು: ಕೆಪಿಎಸ್‌ಸಿ ವಿವಾದಕ್ಕೆ ಹೊಸ ತಿರುವು ನೀಡಿರುವ ಬಿಜೆಪಿ, ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ಅಭ್ಯರ್ಥಿಗಳ ಆಯ್ಕೆ ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದೆ.
ಪಂಜಾಬ್ ಲೋಕಸೇವಾ ಆಯೋಗದಲ್ಲಿ 1996-2002ರವರೆಗೆ ಅಕ್ರಮ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಯೋಗದ ನೇಮಕ ಪ್ರಕ್ರಿಯೆ ರದ್ದುಗೊಲಿಸಲಾಗಿತ್ತು. ಆದರೆ ಪಂಜಾಬ್ ಸರ್ಕಾರದ ಆದೇಶ ಕಾನೂನು ಬಾಹಿರ ಎಂದು 2014 ಮೇನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದಲ್ಲದೇ ನೇಮಕ ಪಟ್ಟಿಯಲ್ಲಿರುವ ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಬೇಕು. ಪ್ರಾಮಾಣಿಕರು ಹಾಗೂ ಭ್ರಷ್ಟರನ್ನು ಒಂದೇ ತಕ್ಕಡಿಯಲ್ಲಿ ಹಾಕಬಾರದು ಎಂದು ಸೂಚಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಸಂವಿಧಾನ ಬಾಹಿರ ಕ್ರಮ ತೆಗೆದುಕೊಂಡಿದೆ ಎಂದು ಮಾಜಿ ಸಚಿವ ಸುರೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2011ರಲ್ಲಿ ನಡೆದ ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ಮೈತ್ರಿ ಎಂಬ ಅಭ್ಯರ್ಥಿಯ ದೂರು ಆಧರಿಸಿ ಕ್ರಮ ಜರುಗಿಸಲಾಗಿದೆ. ಆದರೆ ಸಿಐಡಿ ತನಿಖೆಯಲ್ಲಿ ಕಳಂಕಿತ ಅಭ್ಯರ್ಥಿಗಳ ಬಗ್ಗೆ ತನಿಖೆ ನಡೆಸಿಲ್ಲ.
ಯಾವುದೇ ಆಧಾರಗಳಿಲ್ಲದೆ ಪ್ರಾಮಾಣಿಕ ಅಭ್ಯರ್ಥಿಗಳ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಆದೇಶ ಮರುಪರಿಶೀಲನೆ ಮಾಡದಿದ್ದರೆ ಅಭ್ಯರ್ಥಿಗಳ ಕಾನೂನು ಹೋರಾಟಕ್ಕೆ ಬೆಂಬಲಿಸಬೇಕಾಗುತ್ತದೆ ಎಂದು ಬಿಜೆಪಿ ಕಚೇರಿಯಲ್ಲಿ ಮಂಗಳವರ ತಿಳಿಸಿದರು.
ಸರ್ಕಾರದ ನಿರ್ಧಾರಗಳು ಈ ರೀತಿಯ ಸಂಶಯಗಳಿಗೆ ಎಡೆಮಾಡಿಕೊಟ್ಟಾಗ ನಿರ್ಧಾರದ ಹಿಂದೆ ಬೇರೆ ಕಾರಣವಿರಬಹುದು ಎನಿಸುತ್ತದೆ ಎಂದು ಸುರೇಶ್‌ಕುಮಾರ್ ಆರೋಪಿಸಿದರು.