ಕೆಪಿಎಸ್ಸಿ: ಎಚ್ಡಿಕೆ ವಿರುದ್ಧವೇ ಹೊಸ ಆರೋಪ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೇ ಹೊಸದೊಂದು ಆರೋಪ ಕೇಳಿ ಬಂದಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್ಸಿ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅವರ ಕಚೇರಿಯಿಂದ ಒತ್ತಡ ಹೇರಿದ್ದು ಬಯಲಾಗಿದೆ.
ಇದರೊಂದಿಗೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದಾಗ 1600 ಶಿಫಾರಸು ಪತ್ರಗಳನ್ನು ಬರೆದಿದ್ದರು ಎನ್ನುವ ಎಚ್ಡಿಕೆ ಆರೋಪಕ್ಕೆ, ಹೊಸ ಪ್ರತ್ಯಾರೋಪ ಮಾಡಿದಂತಾಗಿದೆ. ಪರೀಕ್ಷೆಯಲ್ಲಿ ಆಯ್ಕೆಯಾದವರ ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ಅಭ್ಯರ್ಥಿಗಳು ಸಲ್ಲಿಸಬೇಕಿರುವ ಸಿಂಧುತ್ವ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಕಚೇರಿಯಿಂದ ದೂರವಾಣಿ ಕರೆ ಮಾಡಿಸಲಾಗಿತ್ತು. ಇದರಿಂದ ಪ್ರಭಾವಕ್ಕೆ ಒಳಗಾಗಿದ್ದ ಕೋಲಾರ ಜಿಲ್ಲೆಯ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು, ಅಭ್ಯರ್ಥಿಯ ಸಿಂಧುತ್ವ ಪ್ರಮಾಣ ಪತ್ರವನ್ನು ಕೆಪಿಎಸ್ಸಿಗೇ ಸಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಕೆಪಿಎಸ್ಸಿ ಕಾರ್ಯದರ್ಶಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
1998ರ ಬ್ಯಾಚ್ನಲ್ಲಿ ಅಮರೇಂದ್ರ ಎಂಬ ಅಭ್ಯರ್ಥಿ ಪ್ರವರ್ಗ 1ರಲ್ಲಿ ಆಯ್ಕೆಯಾಗಿದ್ದರು. ಅಂತಿಮ ಆಯ್ಕೆ ಪಟ್ಟಿ ಘೋಷಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಜಾತಿ ಮತ್ತು ಆದಾಯ ಕುರಿತ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕಿತ್ತು. ಈ ಪ್ರಮಾಣ ಪತ್ರ ನೀಡುವಾಗ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಅಭ್ಯರ್ಥಿಯ ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಆದರೆ, ಅಮರೇಂದ್ರ ಅವರಿಗೆ ಪ್ರಮಾಣ ಪತ್ರ ಕೊಡಿಸುವುದಕ್ಕಾಗಿ ಅಂದಿನ ಸಿಎಂ ಕುಮಾರಸ್ವಾಮಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಒತ್ತಡ ಹೇರಲಾಗಿದೆ. ಅಂದರೆ, ಸಿಎಂ ಕಚೇರಿಯಿಂದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ದೂರವಾಣಿ ಕರೆ ಹೋಗಿತ್ತು. ಪರಿಣಾಮ ಇಲಾಖೆಯ ಜಿಲ್ಲಾಧಿಕಾರಿಗಳೇ ಅಭ್ಯರ್ಥಿಯ ಸಿಂಧುತ್ವ ಪ್ರಮಾಣ ಪತ್ರವನ್ನು ನೇರವಾಗಿ ಕೆಪಿಎಸ್ಸಿ ಕಾರ್ಯದರ್ಶಿಗೆ ತಲುಪಿಸಿದ್ದರು. ಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ ಕಡ್ಡಾಯವಾಗಿ ಇರಲೇಬೇಕು. ಆದರೆ ಅಮರೇಂದ್ರರಿಗೆ ನೀಡಿರುವ ಪ್ರಮಾಣಪತ್ರದಲ್ಲಿ ಅಭ್ಯರ್ಥಿ ಭಾವಚಿತ್ರವೇ ಇರಲಿಲ್ಲ ಎನ್ನುವುದು ಗೊತ್ತಾಗಿದೆ.